ಅನ್ಯಗ್ರಹದಲ್ಲಿ ನಡೆದ ಮೊದಲ ವೈಮಾನಿಕ ಹಾರಾಟ

ಡಿಸೆಂಬರ್ 17, 1903ರಲ್ಲಿ ಅರ್ವಿಲ್ಲೇ ರೈಟ್ ಮತ್ತು ವಿಲ್ಬರ್ ರೈಟ್ (ರೈಟ್ ಬ್ರದರ್ಸ್) ಇಬ್ಬರೂ ತಾವೇ ರೂಪಿಸಿದ ವಿಮಾನವನ್ನು ಕ್ಯಾಲಿಫೋರ್ನಿಯಾದ ಕಿಟ್ಟಿ ಹಾಕ್ ಪ್ರದೇಶದಲ್ಲಿ ಮೊದಲ ಬಾರಿಗೆ ಹಾರಿಸಿದರು. ಈ ವಿಮಾನವು 12 ಸೆಕೆಂಡುಗಳ ವರೆಗೆ, ಭೂ ಪ್ರದೇಶದಿಂದ 20 ಅಡಿಗಳ ಅಂತರದಲ್ಲಿ ಹಾರಾಟ ನಡೆಸಿತು. ಇದು ಮಾನವನ ಇತಿಹಾಸದಲ್ಲೇ ಒಂದು ಚಾರಿತ್ರಿಕ ಮೈಲುಗಲ್ಲು.  ರೈಟ್ ಬ್ರದರ್ಸ್ ನ ವಿಮಾನ ಹಾರಾಟವಾಗಿ ಒಂದು ದಶಕದ ಅಂತರದಲ್ಲಿಯೇ (1914 ರಲ್ಲಿ) ಪ್ರಪಂಚದ ಮೊದಲ ಪ್ರಯಾಣಿಕ ವಿಮಾನ ಹಾರಿತು.  ನಂತರ ವೈಮಾನಿಕ ಕ್ಷೇತ್ರದಲ್ಲಿ ನಡೆದಿರುವುದೆಲ್ಲವೂ ರೊಚಕ ಇತಿಹಾಸ, ಅದರಲ್ಲೂ 1969, ಜುಲೈ 20 ರಂದು ಚಂದ್ರನ ಮೇಲೆ ನೀಲ್ ಆರ್ಮಸ್ಟ್ರಾಂಗ್ ನುಡಿದ ಮೊದಲ ನುಡಿಯು ಇನ್ನೂ ನಮ್ಮ ಕಿವಿಯಲ್ಲಿ ಗುಂಗುತ್ತಲೇ ಇದೆ. “That’s one small step for man. One giant leap for Mankind”

Wright Borthers Airplane [Credit: Google Photos]

ರೈಟ್ ಬ್ರದರ್ಸ್ ಅಂದು ನಡೆಸಿದ ಮೊದಲ ವಿಮಾನ ಹಾರಟದಂತೆಯೇ ಇಂದು ನಡೆದ (ಏಪ್ರಿಲ್ 19, 2021) ಮತ್ತೊಂದು ಚಾರಿತ್ರಿಕ ಘಟನೆಗೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ.  ಇದು ನಡೆಯುತ್ತಿರುವುದು ಭೂಮಿಯ ಮೇಲೆ ಅಲ್ಲ, ಬದಲಾಗಿ ಭೂಮಿಯಿಂದ ಸುಮಾರು 48 ಕೋಟಿ ಕಿಲೋಮೀಟರ್ ದೂರದಲ್ಲಿರುವ ಮಂಗಳ ಗ್ರಹದ ಮೇಲೆ.

ನಾಸಾ ಬಾಹ್ಯಾಕಾಶ ಸಂಸ್ಥೆಯು ಜುಲೈ 30, 2020ರಂದು ಅಟ್ಲಾಸ್ V 541 ರಾಕೆಟ್ ನಲ್ಲಿ ಪರ್ಸಿವರೆನ್ಸ್ ಎಂಬ ರೋವರ್ ಅನ್ನು ಮಂಗಳ ಗ್ರಹಕ್ಕೆ ಕಳುಹಿಸಿತು. ಈ ರೋವರ್ ಸುಮಾರು ಏಳು ತಿಂಗಳಲ್ಲಿ, 48 ಕೋಟಿ ಕಿಲೋಮೀಟರ್ ಸಂಚರಿಸಿ ಫೆಬ್ರವರಿ 18, 2021 ರಂದು ಸುರಕ್ಷಿತವಾಗಿ ಮಂಗಳನ ಮೇಲೆ ಇಳಿಯಿತು. ಈ ರೋವರ್ ಸುಮಾರು ಒಂದು ಮಂಗಳ-ವರ್ಷಗಳ ಕಾಲ (ಅಂದರೆ 687 ಭೂ ದಿನಗಳು) ಮಂಗಳನ ಮೇಲೆ ತನ್ನಲ್ಲಿರುವ ಏಳು ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಗ್ರಹದ ಅನ್ವೇಷಣೆ ನಡೆಸುತ್ತದೆ. 

Mars 2020: ಪರ್ಸಿವರೆನ್ಸ್ ರೊವರ್ ನ ಉದ್ದೇಶವೇನು?

Perseverence Rover [Credit: NASA/JPL]

ಮಂಗಳ ಗ್ರಹದ ಮೇಲೆ ಇಳಿದಿರುವ ರೋವರ್ ಗಳಲ್ಲಿ ಪರ್ಸಿವರೆನ್ಸ್ ರೋವರ್ ಮೊದಲನೇಯ ರೋವರ್ ಅಲ್ಲಾ. ಈಗಾಗಲೇ ಹಲವು ರೋವರ್ ಗಳು ಮಂಗಳ ಗ್ರಹದಲ್ಲಿ ಅನ್ವೇಷಣೆ ಕೈಗೊಂಡಿವೆ.  ಈ ಎಲ್ಲಾ ರೋವರ್ ಗಳಿಂದ ಬಂದ ಮಾಹಿತಿಯ ಪ್ರಕಾರ ಮಂಗಳ ಗ್ರಹದಲ್ಲಿ ಜೀವಿಗಳು ಹಿಂದೆಂದೋ ಇದ್ದಿರಬಹುದಾದ ಸಾಧ್ಯತೆ ಹೆಚ್ಚಿದೆ ಎಂದು. ಆದರೆ ಯಾವ ರೋವರ್ ಗಳು ಮತ್ತು ಮಂಗಳನ ಕಕ್ಷೆಯಲ್ಲಿ ತಿರುಗುತ್ತಿರುವ ಉಪಗ್ರಹಗಳೂ ಅಲ್ಲಿ ಜೀವಿಗಳಿತ್ತು ಎಂದು ಕಂಡುಹಿಡಿದು ಸಾಬೀತುಪಡಿಸಿಲ್ಲಾ.  ಈಗ ಇಳಿದಿರುವ ಪರ್ಸಿವರೆನ್ಸ್ ರೋವರ್ ಮಂಗಳ ಗ್ರಹದಲ್ಲಿ ಹಿಂದೆದೋ ಇದ್ದ ಜೀವಿಗಳು, ಹೇಗಿದ್ದರಬಹುದು ಎಂಬ ಅಂಶವನ್ನು ಅನ್ವೇಷಣೆ ಮಾಡಲು ಹೊರಟಿದೆ. 

ಜೀವಿಗಳೆಂದರೆ, ಮನುಷ್ಯನ ಗಾತ್ರಕ್ಕೆ ಅಥವಾ ಇನ್ಯಾವುದೋ ಪ್ರಾಣಿಯ ಗಾತ್ರಕ್ಕೆ ಹೊಲುವ ಜೀವಿಗಳಲ್ಲಾ.  ಪರ್ಸಿವರೆನ್ಸ್ ಹುಡುಕಲು ಹೊರಟಿರುವುದು ಸೂಕ್ಷ್ಮಜೀವಿಗಳನ್ನು (Micriobial Life).  ಈ ಜೀವಿಗಳನ್ನು ಹುಡುಕಲು ಮಂಗಳನಲ್ಲಿ ಝೆಜಿರೋ ಕುಳಿಯನ್ನು (Jezero Crator) ಆಯ್ಕೆ ಮಾಡಿಕೊಳ್ಳಲಾಗಿದೆ.  ಯಾಕೆ ಈ ಝೇಜಿರೋ ಕುಳಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರೆ, ಈ ಹಿಂದಿನ ಮಂಗಳನ ಭೂ ಪ್ರದೇಶಗಳ ಅನ್ವೇಷಣೆಯ ಪ್ರಕಾರ ಝೆಜಿರೋ ಕುಳಿಯಲ್ಲಿ ನೀರು ತುಂಬಿಕೊಳ್ಳುತ್ತಿದ್ದ ಸಾಧ್ಯತೆ ಹೆಚ್ಚಿದ್ದು, ಈ ನೀರಿನಲ್ಲಿ ಸೂಕ್ಷ್ಮಜೀವಿಗಳು ಜೀವಿಸಿರಬಹುದು ಎಂದು ವಿಜ್ಞಾನಿಗಳು ಗ್ರಹಿಸಿದ್ದಾರೆ.

ಪರ್ಸಿವರೆನ್ಸ್ ತನ್ನ ಉಪಕರಣಗಳಲ್ಲಿ ಒಂದಾದ ಡ್ರಿಲ್ಲಿಂಗ್ ಮೆಷಿನ್ ಸಹಾಯದಿಂದ ಟ್ಯೂಬ್ ಆಕಾರದಲ್ಲಿ ಮಣ್ಣಿನ ಮಾದರಿಯನ್ನು ತೆಗೆದು, ಒಂದು ಟ್ಯೂಬ್ ನಲ್ಲಿ ತುಂಬಿ, ಅದಕ್ಕೆ ತನ್ನಲ್ಲಿರುವ ಕೆಲವು ವೈಜ್ಞಾನಿಕ ಉಪಕರಣಗಳ ಸಹಾದಿಂದ ಪರಿಕ್ಷೆ ಮಾಡಿ ಡೇಟಾವನ್ನು ಭೂಮಿಗೆ ರವಾನಿಸುತ್ತದೆ.  ಅಲ್ಲದೆ, ಇಂತಹ ಹಲವು ಮಣ್ಣಿನ ಮಾದರಿಗಳನ್ನು ಝೆಜಿರೋ ಕುಳಿಯ ಸುತ್ತಾ ಮುತ್ತಾ ತೆಗೆದು, ಪರೀಕ್ಷಿಸಿ, ಎಲ್ಲಾ ಟ್ಯೂಬ್ ಗಳನ್ನು ಒಂದು ಕಡೆ ಗುಡ್ಡೆ ಹಾಕುತ್ತದೆ.  ಮುಂದಿನ ಹತ್ತು ವರ್ಷದಲ್ಲಿ ಮಂಗಳ ಗ್ರಹಕ್ಕೆ ತೆರಳುವ ಮತ್ತೊಂದು ರೋವರ್, ಪರ್ಸಿವರೆನ್ಸ್ ಸಂಗ್ರಹಿಸಿ ಗುಡ್ಡೆ ಮಾಡಿದ ಮಣ್ಣಿನ ಟ್ಯೂಬ್ ಗಳನ್ನು ಎತ್ತಿಕೊಂಡು ಭೂಮಿಗೆ ಮರಳುತ್ತದೆ. ನಂತರ ಭೂಮಿಯಲ್ಲಿ ಮಂಗಳನ ಮಣ್ಣಿನ ಪೂರ್ಣ ಪ್ರಮಾಣದ ಪರೀಕ್ಷೆಯನ್ನು ಮಾಡಲಾಗುತ್ತದೆ.  ಇದಕ್ಕೆ ಸುಮಾರು 10 ವರ್ಷಗಳ ಕಾಲಾವಕಾಶವನ್ನು ಅಂದಾಜಿಸಲಾಗಿದೆ.  

ಚಂದ್ರನ ನಂತರ ಅತೀ ಹೆಚ್ಚು ಬಾಹ್ಯಾಕಾಶ ಎಕ್ಸಪ್ಲೋರೇಷನ್ ಕೈಗೊಂಡ ಸೌರಮಂಡಲದ ಗ್ರಹ ಎಂದರೆ ಅದು ಮಂಗಳ ಗ್ರಹ.  ಮನುಷ್ಯನು ಚಂದ್ರನಲ್ಲಿ ಒಂದು ನಿಲ್ದಾಣ ಮಾಡಿ, ಅಲ್ಲಿಂದ ಮಂಗಳ ಗ್ರಹಕ್ಕೆ ಬಾಹ್ಯಾಕಾಶಯಾನ ಕೈಗೊಳ್ಳುವ ಕನಸು.  ಈ ಕನಸನ್ನು ನನಸು ಮಾಡುವುದಕ್ಕೆ ಪರ್ಸಿವರೆನ್ಸ್ ಹಲವು ವೈಜ್ಞಾನಿಕ ಮಾಹಿತಿಯನ್ನು ಕಲೆಹಾಕುತ್ತಿದೆ.  ಮಂಗಳ ಗ್ರಹದ ಹವಾಮಾನ, ಭೂ ಪ್ರದೇಶದ ಮಾಹಿತಿ, ಅಲ್ಲಿರುವ ವಾತವರಣದಿಂದ ಆಕ್ಸಿಜನ್ ತಯಾರಿಕೆ ಮತ್ತು ಮಾನವನ ಆಗಮನಕ್ಕೆ ಬೇಕಾದಂತೆ ಹಲವು ಮಾಹಿತಿಯನ್ನು ತನ್ನ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಕಲೆಹಾಕಲಿದೆ. 

ಇದರ ಜೊತೆಗೆ ಪರ್ಸಿವರೆನ್ಸ್ ರೊವರ್ ನ ಹೊಟ್ಟೆಯಲ್ಲಿ 1.8 ಕಿಲೋಗ್ರಾಂ ತೂಕದ ಸಣ್ಣ ಮಾರ್ಸ್ ಹೆಲಿಕಾಪ್ಟರ್ ಒಂದಿದೆ. ಇದನ್ನು ಇಂಜುನಿಟಿ (Ingenuity) ಎಂದು ಕರೆಯಲಾಗಿದೆ. ಈ ಹೆಲಿಕಾಪ್ಟರ್ ನಲ್ಲಿ ಕ್ಯಾಮರಾ, ಸಂವೇದಕಗಳು (sensors) ಮತ್ತು ಬ್ಯಾಟರಿಯನ್ನು ಹೊರತು ಪಡಿಸಿ ಯಾವ ವೈಜ್ಞಾನಿಕ ಉಪಕರಣವೂ ಇಲ್ಲಾ. ಇದು ಸಾಮಾನ್ಯವಾಗಿ ಅಂಗಡಿಯಲ್ಲಿ ಸಿಗುವ ರಿಮೋಟ್ ಕಂಟ್ರೋಲ್ ಹೆಲಿಕಾಪ್ಟರ್ ಮಾದರಿಯಲ್ಲೇ ಇದೆ.  ಆದರೆ ಇದು ಹಾರುವುದು ಮಾತ್ರ ಮಂಗಳ ಗ್ರಹದಲ್ಲಿ! ಇದೆ ಪ್ರಥಮ ಬಾರಿಗೆ ಅನ್ಯಗ್ರಹದಲ್ಲಿ ವೈಮಾನಿಕ ಸಂಚಾರ ನಡೆಸಲು ಅನುವಾಗುವಂತೆ ಪ್ರಾಯೋಗಿಕವಾಗಿ ಈ ಪುಟ್ಟ ಹೆಲಿಕಾಪ್ಟರ್ ಅನ್ನು ನಾಸಾ ಮಂಗಳ ಗ್ರಹದಲ್ಲಿ ಹಾರಿಸಲಿದ್ದು,  ಈ ಪ್ರಯೋಗ ಒಂದು ತಾಂತ್ರಿಕತೆಯ ಪ್ರದರ್ಶನವಾಗಿದೆ (Technology Demonstration).   

ಮಂಗಳ ಗ್ರಹದಲ್ಲಿ ಇಂತಹಾ ಸಣ್ಣ ಹೆಲಿಕಾಪ್ಟ್ ರ್ ಹಾರಿಸಲು ಕಷ್ಟಾನಾ?

ವಿಮಾನ ಅಥವಾ ಹೆಲಿಕಾಪ್ಟರ್ ಹಾರಿಸಬೇಕಾದರೆ, ಭೂಮಿಯ ವಾತವರಣದ ಸಾಂದ್ರತೆ ಎಷ್ಟಿದೆ ಎಂದು ತಿಳಿದು, ಹೆಲಿಕಾಪ್ಟರ್ ಆಗಿದ್ದರೆ ಅದರ ಬ್ಲೇಡ್ ಗಳನ್ನು ಎಷ್ಟು ವೇಗವಾಗಿ ತಿರುಗಿಸಬೇಕು, ವಿಮಾನವಾಗಿದ್ದರೆ, ಟೆಕ್ ಆಫ್ ಮಾಡಲು ಎಷ್ಟು ವೇಗವಾಗಿ ಚಲಿಸಬೇಕು ಎಂದು ಲೆಕ್ಕಾ ಹಾಕಿ ಹಾರಿಸಲಾಗುತ್ತಿದೆ. ಇದೆ ರೀತಿ ಮಂಗಳ ಗ್ರಹಕ್ಕೂ ಮಾಡಲಾಗುತ್ತದೆ. ಮಂಗಳ ಗ್ರಹದ ವಾತವರಣದ ಸಾಂದ್ರತೆ ಭೂಮಿಯ ಶೇಕಡ ಒಂದರಷ್ಟುರುವುದರಿಂದ ಹೆಲಿಕಾಪ್ಟರ್ ಅಥವಾ ವಿಮಾನವನ್ನು ಇಂತಹ ತೆಳುವಾದ ವಾತವರಣದಲ್ಲಿ ಹಾರಿಸುವುದು ಅತ್ಯಂತ ಕಷ್ಟಕರವಾದದ್ದು.

ಮಂಗಳ ಗ್ರಹದ ತೆಳುವಾದ ವಾತರವಣದಲ್ಲಿ ಹೆಲಿಕಾಪ್ಟರ್ ಹಾರಬೇಕಾದರೆ, ಅದರ ಬ್ಲೇಡ್ ಗಳು ಒಂದು ನಿಮಿಷಕ್ಕೆ ಕನಿಷ್ಟ ಅಂದರು 25,000 ಬಾರಿ ತಿರುಗಬೇಕು.  ಭೂಮಿಯಲ್ಲಿ ಈ ಸಂಖ್ಯೆ ಕೇವಲ 500 ರಿಂದ 600! ಇದು ಅತ್ಯಂತ ಸವಾಲಿನ ಕೆಲಸ, ತಾಂತ್ರಿಕವಾಗಿಯೂ ಇಂತಹಾ ಹೆಲಿಕಾಪ್ಟರ್ ಡಿಸೈನ್ ಮಾಡಿ, 48 ಕೋಟಿ ಕಿಲೋಮೀಟರ್ ದೂರದಿಂದ ಕಂಟ್ರೋಲ್ ಮಾಡುವುದು ಇನ್ನೂ ಕಷ್ಟದ ಕೆಲಸ. ಇದೇ ಕಾರಣದಿಂದ ಸತತ ಹತ್ತು ವರ್ಷಗಳ ಪ್ರಯತ್ನದಲ್ಲಿ ನಾಸಾದ ಜೆಟ್ ಪ್ರೋಪುಲ್ಶನ್ ಲ್ಯಾಬೊರೆಟರಿ (Jet Propulsion Laboratory- JPL) ವಿಜ್ಞಾನಿಗಳು, ಇಂಜಿನಿಯರ್ ಗಳು, ಡಿಸೈನರ್ ಗಳು ಎಲ್ಲರೂ ಸೇರಿ ಇಂಜುನಿಟಿ ಎಂಬ ಪುಟ್ಟ ಹೆಲಿಕಾಪ್ಟರ್ ತಯಾರಿಸಿದರು.  ಈ ಹೆಲಿಕಾಪ್ಟರ್ ಅನ್ನು ಪರ್ಸಿವರೆನ್ಸ್ ರೋವರ್ ಮುಖಾಂತರ ಯಾವುದೇ ಅಡೆತಡೆ ಇಲ್ಲದೇ ಮಂಗಳನಲ್ಲಿ ಸುರಕ್ಷಿತವಾಗಿ ತಲುಪಿಸುವುದರಲ್ಲಿ ಈ ವಿಜ್ಞಾನಿಗಳು ಯಶಸ್ವಿಯಾದರು.

ಮಂಗಳ ಗ್ರಹದಲ್ಲಿ ಹಾರಿದ ಇಂಜುನಿಟಿ ಹೆಲಿಕಾಪ್ಟರ್

ಪರ್ಸಿವರೆನ್ಸ್ ತನ್ನ ಹೊಟ್ಟೆಯಲ್ಲಿದ್ದ ಇಂಜುನಿಟಿ ಹೆಲಿಕಾಪ್ಟರ್ ಅನ್ನು ಏಪ್ರಿಲ್ 03, 2021 ರಂದು ಮಂಗಳನ ಅಂಗಳನ ಮೇಲೆ ಇಳಿಬಿಟ್ಟಿತು.  ಇದಾದ ನಂತರ ಇಂಜುನಿಟಿಯ ಸವಾಲು ಮಂಗಳನ ಹವಾಮಾನ ಎದುರಿಸುವುದು.  ರಾತ್ರಿಯ ಸಮಯದಲ್ಲಿ -90 ಡಿಗ್ರಿ ಸೆಲ್ಸಿಯಸ್ ವರೆಗೂ ತಾಪಮಾನ ಇಳಿಯುವುದರಿಂದ, ಇಂಜುನಿಟಿಯ ಉಪಕರಣಗಳು ಹಾಳಾಗದಂತೆ ಡಿಸೈನ್ ಮಾಡುವುದು ಸವಾಲಿನ ಕೆಲಸ. ನಾಸಾದ JPL ವಿಜ್ಞಾನಿಗಳು ಇಂಜುನಿಟಿಯನ್ನು ಈ ಎಲ್ಲಾ ಸಾವಲನ್ನು ಮೆಟ್ಟಿ ನಿಲ್ಲುವಂತೆ ಡಿಸೈನ್ ಮಾಡಿದ್ದರು. ತದನಂತರ ಇಂಜುನಿಟಿ ಹೆಲಿಕಾಪ್ಟರ್ ಗೆ ಏಪ್ರಿಲ್ 19 ರಂದು ಸ್ವಯಂಚಾಲಿತವಾಗಿ ನಿರ್ದಿಷ್ಟ ಎತ್ತರಕ್ಕೆ ಹಾರಿ ನಂತರ ಸುರಕ್ಷಿತವಾಗಿ ಲ್ಯಾಂಡ್ ಆಗುವಂತೆ ಸಿದ್ದಪಡಿಸಿದ್ದ ಕೋಡೆಡ್ ಮಾಹಿತಿಯನ್ನು ಡೀಪ್ ಸ್ಪೆಸ್ ನೆಟ್ ವರ್ಕ್ ಅಂಟೆನಾ ಸಹಾಯದಿಂದ ವಿಜ್ಞಾನಿಗಳು ಕಳುಹಿಸಿದ್ದರು. ಈ ಘಟನೆಯನ್ನು ಅಲ್ಲೆ ದೂರದಲ್ಲಿದ್ದ ಪರ್ಸಿವರೆನ್ಸ್ ರೊವರ್ ತನ್ನ ಕ್ಯಾಮರಾದಿಂದ ವೀಕ್ಷಣೆ ಮಾಡುವ ವ್ಯವಸ್ಥೆ ರೂಪಿಸಲಾಗಿತ್ತು. ಈ ಎಲ್ಲಾ ಘಟನೆಗಳೂ ಸ್ವಯಂಚಾಲಿತವಾಗಿ ನಡೆದು, ಘಟನೆಯ ಪ್ರತಿಯೊಂದು ಡೆಟಾಗಳು, ವಿಡಿಯೋಗಳು ರೆಕಾರ್ಡ್ ಆಗಿ ಭೂಮಿಗೆ ಬರಲು ಸುಮಾರು ನಾಲ್ಕು ಗಂಟೆಯ ಸಮಯ ತೆಗೆದುಕೊಂಡಿತು.  ಇಂಜುನಿಟಿಯಿಂದ ಯಾವ ಡೇಟಾ ಬರಬಹುದು, ಪಲಿತಾಂಶ ಏನಿರಬಹುದೂ ಎಂದು ವಿಜ್ಞಾನಿಗಳು ಕಾದು ಕುಳಿತರು.

ಅದೇ ದಿನ ಭಾರತೀಯ ಕಾಲಮಾನದ ಸಮಯ ಸಂಜೆ ನಾಲ್ಕ ಗಂಟೆಯ ಸುಮಾರಿಗೆ ಇಂಜುನಿಟಿಯಿಂದ ಡೇಟಾ ಅದೇ ಡೀಪ್ ಸ್ಪೆಸ್ ನೆಟ್ ವರ್ಕ್ ಅಂಟೆನಾಯಿಂದ ಭೂಮಿಗೆ ಬಂದಿತು.  ಪರ್ಸಿವರೆನ್ಸ್ ರೋವರ್ ಇಂಜುನಿಟಿಯು ಮಂಗಳನ ಮೇಲ್ಮೈನಿಂದ 3 ಮೀಟರ್ ಹಾರಿ, ಸ್ವಲ್ಪ ಹೊತ್ತು ಗಾಳಿಯಲ್ಲಿದ್ದು ನಂತರ ನೆಲಕ್ಕೆ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದನ್ನು ತಾನು ತೆಗಿದಿದ್ದ ವಿಡಿಯೋ ಮುಖಾಂತರ ಧೃಡೀಕರಿಸಿತು. JPL ಕೊಠಡಿಯಲ್ಲಿ ಉಸಿರು ಬಿಗಿ ಹಿಡಿದು ಕಾಯುತ್ತಿದ್ದ ವಿಜ್ಞಾನಿಗಳಿಗೆ ಒಮ್ಮೆಲೆ ಉತ್ಸಹಾ, ಸಂತೋಷದ ಕಟ್ಟೆ ಒಡೆಯಿತು.  ಮಾನವನ ಇತಹಾಸದಲ್ಲಿಯೇ ಅನ್ಯಗ್ರಹದಲ್ಲಿ ನಿಯಂತ್ರಿತ ವೈಮಾನಿಕ ಹಾರಾಟ ನಡೆಸಿರುವುದು ಇದೆ ಮೊದಲನೆಯದು. 

Ingeunity Helicopter on Mars [Credit: NASA/JPL]

ಸಧ್ಯಕ್ಕೆ ಈ ಹಾರಾಟ ಚಿಕ್ಕದಾದರೂ ಮುಂದಿನ ವರ್ಷದಲ್ಲಿ ಇತರ ಗ್ರಹಗಳ ಮೇಲೂ ಹಾರಲು ಯೋಗ್ಯವಾದ ಹೆಲಿಕಾಪ್ಟರ್ ಮತ್ತು ವಿಮಾನಗಳನ್ನು ತಯಾರಿಸುವುದಕ್ಕೆ ಇಟ್ಟ ಮೊದಲ ಚಾರಿತ್ರಿಕ ಹೆಜ್ಜೆಗೆ ನಾವೆಲ್ಲರೂ ಸಾಕ್ಷಿಯಾಗಿರುವುದಂತು ಸತ್ಯ.  ಮುಂದಿನ ಒಂದು ತಿಂಗಳಿನಲ್ಲಿ ಇಂಜುನಿಟಿ ಇಂತಹಾ ಐದು ವೈಮಾನಿಕ ಹಾರಾಟಾ ನಡೆಸಲು ಅನುವಾಗುವಂತೆ ಸಿದ್ದಪಡಿಸಲಾಗಿದೆ.  ಇದು ಮಂಗಳ ಗ್ರಹದ ತೆಳುವಾದ ವಾತವರಣದ ಬಗ್ಗೆ ಮತ್ತಷ್ಟು ಹೆಚ್ಚು ಮಾಹಿತಿಯನ್ನು ನಮಗೆ ನೀಡಲಿದೆ.  ಇಂಜುನಿಟಿ (Ingeunity) ಎಂದರೆ ಕೆಲಸಗಳನ್ನು ಕೌಶಲ್ಯದಿಂದ ಹೊಸರೀತಿಯಲ್ಲಿ ಮಾಡುವುದು. ಹಾಗೆಯೇ ಮಂಗಳನಲ್ಲಿರುವ ಇಂಜುನಿಟಿ, ನಮ್ಮಲ್ಲಿ ಹೊಸ ಯೋಚನೆಗಳನ್ನು, ಹೊಸ ಪ್ರಶ್ನೆಗಳನ್ನು, ಹೊಸ ವಿಚಾರಗಳನ್ನು ಕಲಿಯಲು ಪ್ರೇರೇಪಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮನುಷ್ಯನು ಮಂಗಳ ಗ್ರಹಕ್ಕೆ ತೆರಳುವ ಕನಸುಗಳನ್ನು ನನಸು ಮಾಡಲು ಮೊದಲ ಅಂಬೆಗಾಲಿಟ್ಟಿರುವುದಂತೂ ನಿಜ.

Leave a comment