ಅವನು ಗಡಿಗೆ ಹೊರಟನು;
ಇವಳು ಗುಡಿಗೆ ಹೋದಳು.
ಅವನು ದೇಶಕ್ಕಾಗಿ ಪ್ರಾಣ ನೀಡಲು ಹೊರಟನು;
ಇವಳು ದೇಶಕ್ಕಾಗಿ ಶಾಂತಿ ಜಪಿಸಲು ಹೋದಳು.
ಅವನು ರಾತ್ರಿ ಹಗಲೆನ್ನದೆ ಗಡಿ ಕಾಯಲು ಪಣತೊಟ್ಟನು;
ಇವಳು ಗುಡಿಯಿಂದ ಮನೆಗೆ ಬಂದಳು.
ಅವನಿದ್ದ ಗಡಿಯಿಂದ ಬಂತು,
ವೀರ ಮರಣದ ಸುದ್ದಿ; ಸುದ್ದಿ ಕೇಳಲಾಗದೆ
ಇವಳು ಮತ್ತೊಮ್ಮೆ ಗುಡಿಗೆ ಹೋದಳು.
ಗುಡಿಯ ದೇವರ ಕಣ್ಣಲ್ಲಿ ನೀರು ಜಿನುಗಿತ್ತು;
ಕೇಳಿದಳು, ಏಕೆ ನನ್ನ ಶಾಂತಿಯ ಜಪ ಮನ್ನಿಸಿದೆ?
ಅದಕ್ಕೆ, ದೇವರು ಗದ್ಗದಿಸಿದನು;
ಗಡಿಯ ಸೃಷ್ಟಿ ನಾನಲ್ಲ,
ನೋಡಲಾರೆ ನನ್ನ ಮಕ್ಕಳ “ಸಾವನ್ನು”, ಹೀಗೆ.
ಈಗ ನಾನು ನಿನ್ನಷ್ಟೇ ದುಃಖಿತನು;
ಹುಡುಕುತ್ತಿರುವೆ, ಇದೇಕ್ಕೆಲ್ಲ ಕಾರಣರಾರೆಂದು?
ಲೋಕ ಸೃಷ್ಟಿ ಕರ್ತನ ಆ ಮಾತು ಕೇಳಿ ನಕ್ಕಳು.
ದೇವರಿಗೆ ದುಃಖ ಇನ್ನಷ್ಟು ಉಮ್ಮಳಿಸಿ ಬಂತು;
ಅಷ್ಟರಲ್ಲಿ-
ವೀರ ಮರಣವ ಸಾವೆಂದವನನ್ನು ಕೊಲ್ಲಲು;
ಬರುತ್ತಿರುವ ಭಕ್ತರನ್ನು ಕಂಡಳು; ದೇವರನ್ನು ಉಳಿಸಲು;
ಇವಳೇ ಗಡಿಯ (ಗುಡಿಯ) ಕಾದಳು,
ಮತ್ತೊಮ್ಮೆ, ಶಾಂತಿ ಮಂತ್ರವ ಜಪಿಸಿದಳು…
ಅವಳ ಮನೆಯಲ್ಲಿ, ಗಡಿಯಿಂದ ಬಂದಿದ್ದ,
ಬಾವುಟ ಸುತ್ತಿದ ಅವನ ಕಳೆಬರಹ
ಇವಳಿಗಾಗಿ ಕಾದಿತ್ತು.
