ಬದುಕಿನ ಕಡಲು

ಓ ಕಡಲೇ, ಎಲ್ಲಿಂದ ತರುತಿರುವೆ
ಈ ಏರುತಿರುವ ಅಲೆಗಳನ್ನು?
ದೃಷ್ಠಿ ಹರಿಯುವ ತನಕ ಸಮನಾಗಿದ್ದು
ಹತ್ತಿರ ಬಂದಾಗ ಏರುತಿರುವೆ ಏಕೆ?

ಕಾಣದ ಅಂಚಿನಿಂದ ಬರುತಿಹುದು
ನೋವು ನಲಿವಿನ ಅಲೆಗಳು;
ಪ್ರೀತಿ ಧ್ವೇಷದ ಅಲೆಗಳು;
ಬದುಕು ಸಾವಿನ ಅಲೆಗಳು;
ಹಂಚುತಿರುವೆ ಸಮನಾಗಿ
ಯಾರಿಗೂ ಭೇದ ಭಾವ ತೋರದೆ.

ಮೋಡಗಳ ತುದಿಗೆ ಕಿರಣಗಳು ತಾಗಿ
ಹೊಳೆಯುತಿಹುದು ಹೊನ್ನಿನ ಬೆಳಕು,
ಮನಸ್ಸಿನ ಕತ್ತಲೆಯ ರಾಢಿಗೊಳಿಸಿ
ಒಳಗೆ ಮೂಡಿಸಿತು ಬಣ್ಣದ ಕನಸು.

ಹೊಸ ದಿನಕ್ಕೆ ತಯಾರಾಗುವ ಸೂರ್ಯ
ಕಡಲ ಚುಂಬಿಸಿ ಹೊರಟಿಹನು,
ನಮ್ಮಯ ನಾಳೆಯ ಬದುಕಿಗೆ
ಹೊಸ ಚೇತನವ ಮೂಡಿಸಿ ಹೊರಟಿಹನು.

ಅಲೆಯ ಏರುಪೇರುಗಳರಿತು
ಬಾಳುವುದೇ ನನ್ನಿ ಜೀವನ.
ಎಲ್ಲವೂ ಸಮನಾಗಿ ಸ್ವೀಕರಿಸಿ
ಮುಂದೆ ಸಾಗುವುದೇ ಮನುಜ ಮತ;
ಇದೇ ವಿಶ್ವ ಪಥ!

ಓ ಕಡಲೇ, ಎಲ್ಲಿಂದಲಾದರೂ
ಹೇಗಾದರೂ ತರುತಿರು ಅಲೆಗಳ,
ಕಾಣದ ಅಂಚಿಗೆ ತುಡಿಯುವ ಮನಸ್ಸಿಗೆ
ನಿನ್ನ ಈ ಅಲೆಗಳೇ ಸ್ಪೂರ್ತಿ.

Leave a comment