ಮುಗಿಲ ಮಾರಿಗೆ ರಾಗರತೀಯ ರಂಗು ಏರಿತ್ತಾ… ಆಗ ಅರೋರಾ ಕಂಡಿತ್ತಾ!

Photo by Achyut Jamadagni

ಸಾಮಾಜಿಕ ಮಾಧ್ಯಮಗಳಲ್ಲಿ ಆಗಸದಲ್ಲಿ ಬಣ್ಣದ ಬೆಳಕು ಮೂಡಿರುವ Aurora* (ಅರೋರಾ) ಚಿತ್ರಗಳನ್ನು ನೀವು ನೋಡಿರಬಹುದು. ಆಗಸದಲ್ಲಿ ವಿವಿಧ ಬಣ್ಣಗಳ ಬೆಳಕಿನ ಚಿತ್ತಾರಗಳನ್ನು ಬಿಡಿಸಿ ನಮ್ಮನ್ನು ಕಲ್ಪನಾ ಲೋಕಕ್ಕೆ ತೆರಳಿದಂತೆ ಅನುಭವ ನೀಡುವ ಈ ಅರೋರಾ ಭೂಮಿಯಿಂದ ನಾವು ನೋಡಬಹುದಾದ ಮಂತ್ರ ಮುಗ್ದಗೊಳಿಸುವ ಒಂದು ಸುಂದರ ಖಗೋಳ ವಿದ್ಯಮಾನ! ಹೆಚ್ಚಾಗಿ ಉತ್ತರ / ದಕ್ಷಿಣ ಧೃವ ಪ್ರದೇಶಕ್ಕೆ ಮಾತ್ರ ಸೀಮಿತವಿದ್ದ ಅರೋರಾ ಈ ಬಾರಿ ಉತ್ತರ ಧೃವದಿಂದ ದೂರವಿರುವ ಭಾರತದ ಲಡಾಕ್‌ ಪ್ರದೇಶದಿಂದಲೂ ಕಂಡಿರುವುದು ಒಂದು ಅಚ್ಚರಿಯೇ ಸರಿ. 

ಅರೋರಾ ಅನ್ನು ಸಾಮಾನ್ಯವಾಗಿ Northern Lights and Southern Lights ಎಂದು ಕರೆಯುತ್ತಾರೆ.  ಕನ್ನಡದಲ್ಲಿ ಉತ್ತರ ಧೃವದ ಬೆಳಕು ಮತ್ತು ದಕ್ಷಿಣ ಧೃವದ ಬೆಳಕು ಎಂದು ಕರೆಯಬಹುದು.  ಉತ್ತರದ ಪ್ರದೇಶಗಳಲ್ಲಿ ಕಾಣುವ ಅರೋರಾ ವನ್ನು Aurora Borialis ಮತ್ತು ದಕ್ಷಿಣ ಧೃವದ ಪ್ರದೇಶದಲ್ಲಿ Aurora Australis ಎಂದು ಕರೆಯುತ್ತಾರೆ.

ಅರೋರ ಒಂದು ಖಗೋಳ ವಿದ್ಯಮಾನವಾದರೂ, ಧೃವ ಪ್ರದೇಶದ ರಾತ್ರಿಯ ಆಗಸದಲ್ಲಿ ರಂಗು ರಂಗಿನ ಬಣ್ಣದ ಬೆಳಕಿನ ಅರೊರಾ ಮೂಡುವುದು ಭೂಮಿಯ ವಾತವರಣದಲ್ಲಿಯೇ. ಆದರೇ, ಆರೋರಾ ಮೂಡುವುದಕ್ಕೆ ಕಾರಣ ಮಾತ್ರ ಸೂರ್ಯ!  ಸೂರ್ಯ ಒಂದು ನಕ್ಷತ್ರ.  ಸೂರ್ಯನು ತನ್ನೊಳಗೆ ನಡೆಯುವ ಪರಮಾಣು ಸಮ್ಮಿಳನ ಕ್ರಿಯೆಯಿಂದ (Nuclear Fusion Reaction) ಅತೀ ಹೆಚ್ಚು ಶಕ್ತಿಯನ್ನು (Energy) ಸೃಷ್ಟಿಸಿ, ಸೂರ್ಯ ಬೆಂಕಿಯ ಚೆಂಡಿನಂತೆ ಹೊಳೆಯುತ್ತದೆ.  ಸೂರ್ಯದಿಂದ ಬರುವ ಬೆಳಕಿನ ಶಕ್ತಿಯೇ, ಭೂಮಿಯ ಜೀವ ರಾಶಿಯ ಮೂಲ.  ಇಂತ ಸೂರ್ಯ, ಅಗ್ಗಿಂದ್ದಾಗೆ ಯಾವುದೇ ಮನ್ಸೂಚನೆ ಇಲ್ಲದೆ, ಸೌರ ಅಲೆಗಳು, ಸೌರ ಚಂಡ ಮಾರುತಗಳು ಮತ್ತು ಹೆಚ್ಚು ಶಕ್ತಿಯುಳ್ಳ ವಿದ್ಯುದಾವೇಶ ಕಣಗಳ ಮೋಡಗಳನ್ನು ಹೊರೆಗೆ ಬಿಸಾಡುತ್ತದೆ.  ಇತರಹದ ಸೌರ ಮಾರುತಗಳು, ವಿದ್ಯುದಾವೇಶದ ಕಣಗಳ ಮೊಡಗಳು ಸಾವಿರಾರು ಕಿಲೋ ಮೀಟರ್‌ಗಳಷ್ಟು ದೊಡ್ಡದಾಗಿದ್ದು, ಲಕ್ಷಾಂತರ ಕಿಲೋ ಮೀಟರ್‌ ಚಲಿಸಿ, ಭೂಮಿಗೆ ಅಪ್ಪಳಿಸುತ್ತವೆ. 

ಇಂತಹಾ ಕಣಗಳ ಮೋಡಗಳು ಹೆಚ್ಚಿನವು ಬಾಹ್ಯಾಕಾಶದಲ್ಲಿ ವಿವಿಧ ದಿಕ್ಕಿನಲ್ಲಿ ಚಲಿಸಿದರೂ, ಸೂರ್ಯನಿಂದ ಭೂಮಿ ಇರುವ ದಿಕ್ಕಿಗೆ ಬರುವ ಕಣಗಳ ಮೋಡುಗಳು ಭೂಮಿಗೆ ಅಪ್ಪಳಿಸುತ್ತವೆ.  ಈಗೆ ಅಪ್ಪಳಿಸುವ ಶಕ್ತಿಯುತ ಕಣಗಳು ವಿದ್ಯುದಾವೇಶ (Electrically Charged Particles) ಹೊಂದಿರುವುದರಿಂದ, ಭೂಮಿಯ ಕಾಂತೀಯ ಕ್ಷೇತ್ರವು (Earth’s Magnetic Field) ಈ ಶಕ್ತಿಯುತ ಕಣಗಳನ್ನು ಭೂಮಿಯ ಧೃವ ಪ್ರದೇಶಗಳಿಗೆ ನೂಕುತ್ತದೆ.  ಭೂಮಿಯ ಧೃವ ಪ್ರದೇಶದಲ್ಲಿ ಈ ಕಣಗಳು ವಾತವರಣದ ಅಯಾನುಗೋಳದಲ್ಲಿನ (Ionspere) ಅನಿಲಗಳ ಕಣಗಳ ಜೊತೆಗೆ ಡಿಕ್ಕಿ ಹೊಡೆದು, ಅನಿಲಗಳ ಕಣಗಳನ್ನು ಕಾಯಿಸುತ್ತದೆ.  ಇದನ್ನು ವೈಜ್ಞಾನಿಕವಾಗಿ excitation process (ಪ್ರಚೋದನೆ) ಎಂದು ಕರೆಯುತ್ತೇವೆ.  ಈ ಅರೋರಾ, ಭೂಮಿಯ ವಾತವರಣದಲ್ಲಿರುವ ವಿವಿಧ ಅನಿಲಗಳ ಕಣಗಳಿಗೆ ಸೂರ್ಯನಿಂದ ಬಂದಿರುವ ಶಕ್ತಿಯುತ ಕಣಗಳು ಡಿಕ್ಕಿ ಹೊಡೆದು, ಕಾಯಿಸಿ, ಬೆಳಕು ಹೊರಸೂಸುವ ಕ್ರಿಯೆಯಾಗಿದೆ. ಭೂಮಿಯ ಕಾಂತೀಯ ಕ್ಷೇತ್ರ ಸೂರ್ಯನಿಂದ ಬರುವ ಶಕ್ತಿಯುತ ಕಣಗಳನ್ನು ಧೃವ ಪ್ರದೇಶಗಳಿಗೆ ನೂಕುವುದರಿಂದ, ಅರೋರವನ್ನು ನಾವು ಧೃವ ಪ್ರದೇಶಗಳಲ್ಲಿ ಮಾತ್ರ ಕಾಣಬಹುದು.   ಈ ಅರೋರಾದ ಬೆಳಕು ತರಂಗದ ಮಾದರಿಯಲ್ಲಿ ರಾತ್ರಿ ಆಕಾಶದಲ್ಲಿ ಮೂಡುವುದಾಗಿದ್ದು, ಭೂಮಿಯ ಕಾಂತೀಯ ಕ್ಷೇತ್ರದ ರೇಖೆಗಳಿಂದಾಗಿ ಇಂತಹಾ ತರಂಗದ ಮಾದರಿಯ ಅರೋರಾಗಳು ಉಂಟಾಗುತ್ತವೆ. 

ಅರೋರಾದ ಬೆಳಕು ಹೇಗೆ ಮೂಡುತ್ತದೆ ಎಂದು ಅರ್ಥ ಮಾಡಿಕೊಂಡೆವು.  ಆದರೆ, ಅರೋರದ ರಂಗು ರಂಗಿನ ಬಣ್ಣ ಎಲ್ಲಿಂದ ಬಂದಿತು?  ಇದಕ್ಕೆ ಕಾರಣ ಭೂಮಿಯ ವಾತವರಣದಲ್ಲಿರುವ ಅನಿಲಗಳು.  ವಿವಿಧ ಅನಿಲಗಳಿಗೆ ಶಾಖ ನೀಡಿದಾಗ, ಅವು ವಿವಿಧ ಬಣ್ಣದ ಬೆಳಕನ್ನು ಹೊರ ಹಾಕುತ್ತದೆ.  ಭೂಮಿಯ ವಾತವರಣದಲ್ಲಿ ಅತೀ ಹೆಚ್ಚು ಸಾರಜನಕ (Nitrogen) ಮತ್ತು ಆಮ್ಲಜನಕ (Oxygen) ಅನಿಲಗಳಿವೆ.  ಅರೊರಾದಲ್ಲಿನ ಹಸಿರ ಬಣ್ಣ, ಆಮ್ಲಜನಕದ ಕಣಗಳ ಪ್ರಚೋದನೆಯಿಂದ ಬಂದರೆ, ನೀಲಿ ಮತ್ತು ಪಿಂಕ್‌ ಬಣ್ಣಗಳು ಸಾರಜನಕದ ಕಣಗಳ ಪ್ರಚೋದನೆಯಿಂದ ಉಂಟಾಗುತ್ತದೆ. ಇತರೆ ಅನಿಲ ಕಣಗಳ ಪ್ರಚೋದನೆಯಿಂದ ಬೇರೆ ಬೇರೆ ಬಣ್ಣಗಳನ್ನು ಸಹ ಕಾಣಬಹುದು. ಅರೋರಾ ಭೂಮಿಯಲ್ಲಲ್ಲದೆ, ಇತರೆ ಗ್ರಹಗಳಲ್ಲೂ ಕೂಡ ಕಾಣಬಹುದಾಗಿದ್ದು, ಖಗೋಳ ನೌಕೆಗಳು ಕೆಲವು ಗ್ರಹಗಳ ಅರೊರಾ ಚಿತ್ರಗಳನ್ನೂ ಸಹ ಸೆರೆ ಹಿಡಿದಿದೆ.

ಅರೋರಾವನ್ನು ಬರೀ ಕಣ್ಣಿನಿಂದ ನೋಡಬಹುದು.  ಆದರೆ, ಪೋಟೋದಲ್ಲಿ ಕಾಣುವಷ್ಟು ಪ್ರಕರವಾಗಿ ಬರೀ ಕಣ್ಣಿಗೆ ಕಾಣಿಸುವುದಿಲ್ಲ.  ಅರೋರಾ ಪೋಟೋಗಳನ್ನು Long Exposure ನಲ್ಲಿ ಸೆರೆ ಹಿಡಿದಿರುತ್ತಾರೆ, ಹಾಗಾಗಿ ಪೋಟೋದಲ್ಲಿ ಹೆಚ್ಚು ಪ್ರಕರವಾಗಿ ಕಾಣುತ್ತದೆ. ಮಾನವನು ಬಹಳ ಹಿಂದಿನಿಂದಲೂ ಅರೋರಾವನ್ನು ನೋಡಿರುವುದನ್ನು ದಾಖಲಿಸಿದ್ದಾನೆ. ಸುಮಾರು 30 ಸಾವಿರ ವರ್ಷಗಳ ಹಿಂದೆ ಶೀಲಾಯುಗದ ಗುಹೆಯೊಳಗಿನ ಚತ್ರಗಳಲ್ಲಿ ಅರೋರಾವನ್ನು ದಾಖಲಿಸಿರುವುದನ್ನು ನಾವು ಕಾಣಬಹುದು.  ಅರಿಸ್ಟಾಟಲ್‌ ಕೂಡ ಅರೊರಾವನ್ನು ತನ್ನ ಪುಸ್ತಕದಲ್ಲಿ ದಾಖಲಿಸುತ್ತಾನೆ. ರೋಮನ್‌ನ ಒಬ್ಬ ದೊರೆ ಸೀಸರ್, ಆಗಸದಲ್ಲಿ ತಾನು ಕಂಡ ಬಣ್ಣದ ಬೆಳಕನ್ನು, ಬೆಂಕಿಯ ಜ್ವಾಲೆ ಎಂದು ತಿಳಿದು, ಇಟಲಿಯ ಒಂದು ನಗರ ಹೊತ್ತಿ ಉರಿಯುತ್ತಿರಬಹುದೆಂದು ಭಾವಿಸಿ, ತನ್ನ ಜನಗಳನ್ನು ಅಲ್ಲಿಗೆ ಕಳುಹಿಸುತ್ತಾನೆ. ಆದರೆ, ಅದು ಬಣ್ಣದ ಬೆಳಕಿನ ಅರೋರಾವಾಗಿರುತ್ತದೆ.  ಅರೋರಾ ಎಂಬ ಪದವನ್ನು ಮೊದಲಬಾರಿಗೆ ಪ್ರಯೋಗಿಸಿದ್ದು, ಗೆಲಿಲಿಯೋ ಗೆಲಿಲಿ.  Aurora Boreas ಎಂಬುದು ಗ್ರೀಕ್‌ ಪದ, aurora ಎಂದರೆ sunrise ಎಂದರ್ಧ.  Boreas ಎಂದರೆ wind ಎಂದರ್ಧ.  ಗ್ರೀಕರು Aurora ಅನ್ನು Helios ಮತ್ತು Selene ಯ ತಂಗಿ ಎಂದು ತಿಳಿದಿದ್ದರು.  Helios ಎಂದರೆ ಸೂರ್ಯ, Selene ಎಂದರೆ ಚಂದ್ರ. 

ಈಗ ಬೇಂದ್ರಯ ಹಾಡನ್ನು ಅರೋರಾಗೆ ಹೀಗೆ ಬರೆಯಬಹುದೇನೋ
“ಮುಗಿಲ ಮಾರಿಗೆ ರಾಗರತೀಯ
ರಂಗು ಏರಿತ್ತಾ… ಆಗ ಅರೋರಾ ಕಂಡಿತ್ತಾ.
ಇರುಳ ಹರಳಿನ ಧೃವದ ಕಡೆಗೆ
ಚುಕ್ಕಿ ಹತ್ತಿತ್ತಾ… ಜೊತೆಗೆ ಬಣ್ಣವು ಏರಿತ್ತಾ.
ಆಗ ಅರೋರಾ ಕಂಡಿತ್ತಾ…

*Auroraಗೆ ಕನ್ನಡ ಪದ ಸುಸಿಲು, ಮುಂಬೆಳಕು ಎಂಬುದಾಗಿಯೂ ಇದೆ.

——————————————————————–

Aurora at Ladak