ಕೂಗು

ಕಣ್ಣಂಚಿನ ಹನಿಯು ಹೇಳುತಿದೆ
ನಾ ನಿನ್ನ ಕಂಡೆ ಎಂದು
ತುಟಿಯಂಚಿನ ನಗುವು ಹೇಳುತಿದೆ
ನಾ ನಿನ್ನ ಬಲ್ಲೆ ಎಂದು
ರಾತ್ರಿಯ ಕನಸೆಲ್ಲವೂ ಹೇಳುತಿದೆ
ನೀ ನನ್ನ ಕನಸು ಎಂದು
ಪ್ರತಿ ಹೃದಯದ ಬಡಿತ ಹೇಳುತಿದೆ
ನೀ ನನ್ನ ಜೀವ ಎಂದು
ನನ್ನ ಪ್ರೀತಿಯ ಮನಸ್ಸು
ಕೂಗಿ ಕೂಗಿ ಹೇಳುತಿದೆ
ಇಲ್ಲಿ ಯಾರು ಇಲ್ಲ ಎಂದು

ಎರಡು ಸಾಲುಗಳು

ಆ ಎರಡು ಸಾಲುಗಳು
ಎಷ್ಟು ನೆನೆದರು ನೆನಪಿಗೆ ಬರುತ್ತಿಲ್ಲ
ಯಾರು ಎಲ್ಲಿಗೆ ಕರೆದೊದರೊ?
ಎಲ್ಲಿ ಕಷ್ಟಗಳುನುಭವಿಸುತ್ತಿವೆಯೋ?
ಯಾವ ಧುರುಳರಡಿಯಲಿ ಸಿಲುಕಿ ನರಳುತ್ತಿವೆಯೋ?

ಕರೆದೊದರೊ, ಕದ್ದೊದರೋ,
ಒದ್ದೋದರೋ, ತುಳಿದೊದರೊ, ಗೊತ್ತಿಲ್ಲ.
ಆ ಸಾಲುಗಳ ಕಣ್ಮರೆಗೆ ಅಲ್ಲಿರುವ ದೊರೆಯೇ,
ಅವನ ಭಕ್ತರೇ ಕಾರಣ ಎಂಬ ಆ
ಹುಚ್ಚನ ಪಠಣ ಯಾರು ಕೇಳಿಯಾರು?
ಎಲ್ಲರೂ ಹುಚ್ಚರಾಗುವ ಬದಲು ಭಕ್ತರಾಗುತ್ತಿರುವುದನ್ನ
ಸಾರಿ ಸಾರಿ ಹೇಳಿದ ಅಲ್ಲಿದ್ದ ಯೋಗಿಯೊಬ್ಬ…

ಹೀಗಿರುವಾಗ, ಅಲ್ಲೆಲ್ಲೋ….
ಹುಣ್ಣಿಮೆ ಬೆಳಕ ಮರೆಯಲ್ಲಿ
ನಿಂತ ಪ್ರೀತಿ ಅತ್ತಿತ್ತ ನೋಡುತ್ತಾ,
ಕಣ್ಣು ಮಿಟಿಕಿಸುತ್ತ, ಎಲ್ಲರ ಕಣ್ತಪ್ಪಿಸಿ,
ಆ ಎರಡು ಸಾಲುಗಳ ಹುಡುಕುತ್ತಿತ್ತು.

ಆಕಾಶ ವೀಕ್ಷಣೆ

ಇಳೆಯ ಬೆಳಗಿ ಜಾರಿದನು ಸೂರ್ಯ
ನಭವ ಬೆಳಗಲು ಮೂಡುತಿಹವು
ಎಣಿಸಲಾಗದಷ್ಟು ಚುಕ್ಕಿಗಳು;
ಅಲ್ಲೆಲ್ಲೋ ಅವಿತುಕೊಂಡಿವೆ
ಮಿನುಗದಿರುವ ತಾರೆಗಳು
ರಾಶಿ ಪಥದಲ್ಲಿ ಅಲೆಯುವ ಗ್ರಹಗಳು

ರವಿ ಇಳಿದ ದಿಕ್ಕಿನಲ್ಲಿ, ಬೆಳ್ಳಿ ಮೂಡಿಹನು
ಸಲ್ಫರ್ ಗಳ ಮೋಡ ಹಿಡಿದಿರುವ ಶುಕ್ರ;
ಪಡುವಣದಿಕ್ಕಿನಿಂದ ಬೆಳ್ಳಿಯ ನಂತರ
ಅನಿಲ ಮೋಡಗಳ ಧೈತ್ಯನಾದ ಗುರು ದರ್ಶನ;
ನೆತ್ತಿಯ ಆಸು ಪಾಸಲ್ಲೇ, ಹಳದಿ-ಕೆಂಪು
ಮಿಶ್ರಿತ ಮಂಗಳನ ಅಂಗಳ ಗೋಚರ;
ತನ್ನ ಬಳೆಯ ವಾರೆ ನೋಟದಲ್ಲೇ ಮನ
ಗೆದ್ದಿರುವ ಶನಿ, ಈಗ ಮಂಗಳನ ಹಿಂಬಾಲಿಕ

ದಿನ ಪೂರ್ತಿ ದಣಿದ ದೇಹಕ್ಕೆ
ಇಳೆಯ ಬೆಳಕೇ ಮಾಸಿದ ಅಕ್ಷಿಗೆ
ಅಸಂಖ್ಯಾತ ವರ್ಷಗಳಿಂದ
ಚಲಿಸಿರುವ ಕಿರಣಗಳ ದರ್ಶಿಸಿ
ಜಗದೊಳಗೊಂದಾಗಿರಿ