ಇಳೆಯ ಬೆಳಗಿ ಜಾರಿದನು ಸೂರ್ಯ
ನಭವ ಬೆಳಗಲು ಮೂಡುತಿಹವು
ಎಣಿಸಲಾಗದಷ್ಟು ಚುಕ್ಕಿಗಳು;
ಅಲ್ಲೆಲ್ಲೋ ಅವಿತುಕೊಂಡಿವೆ
ಮಿನುಗದಿರುವ ತಾರೆಗಳು
ರಾಶಿ ಪಥದಲ್ಲಿ ಅಲೆಯುವ ಗ್ರಹಗಳು
ರವಿ ಇಳಿದ ದಿಕ್ಕಿನಲ್ಲಿ, ಬೆಳ್ಳಿ ಮೂಡಿಹನು
ಸಲ್ಫರ್ ಗಳ ಮೋಡ ಹಿಡಿದಿರುವ ಶುಕ್ರ;
ಪಡುವಣದಿಕ್ಕಿನಿಂದ ಬೆಳ್ಳಿಯ ನಂತರ
ಅನಿಲ ಮೋಡಗಳ ಧೈತ್ಯನಾದ ಗುರು ದರ್ಶನ;
ನೆತ್ತಿಯ ಆಸು ಪಾಸಲ್ಲೇ, ಹಳದಿ-ಕೆಂಪು
ಮಿಶ್ರಿತ ಮಂಗಳನ ಅಂಗಳ ಗೋಚರ;
ತನ್ನ ಬಳೆಯ ವಾರೆ ನೋಟದಲ್ಲೇ ಮನ
ಗೆದ್ದಿರುವ ಶನಿ, ಈಗ ಮಂಗಳನ ಹಿಂಬಾಲಿಕ
ದಿನ ಪೂರ್ತಿ ದಣಿದ ದೇಹಕ್ಕೆ
ಇಳೆಯ ಬೆಳಕೇ ಮಾಸಿದ ಅಕ್ಷಿಗೆ
ಅಸಂಖ್ಯಾತ ವರ್ಷಗಳಿಂದ
ಚಲಿಸಿರುವ ಕಿರಣಗಳ ದರ್ಶಿಸಿ
ಜಗದೊಳಗೊಂದಾಗಿರಿ
