ಅದ್ಯಕೋ ಏನೋ
ಅಂದೊಂದು ರಾತ್ರಿ, ಆಕಾಶದಲಿ
ಒಂದು ಚುಕ್ಕಿ ಕಂಡಿತು,
ಬಲು ಅಪರೂಪದ ಚುಕ್ಕಿ
ಇಂದೆಂದೂ ಕಾಣಿಸದ ಚುಕ್ಕಿ
ತಣ್ಣಗಿದ್ದ ಮನಸ್ಸಿಗೆ
ಕಟ್ಟಿತು ಬಣ್ಣದ ಕನಸ,
ಎದೆಯೊಳಗರಳಿತೊಂದು
ಪ್ರೀತಿಯ ಹೂವು, ನೋಡು
ನೋಡುತ್ತಿದ್ದಂತೆಯೇ
ಚಂದ್ರನಗಿಂತಲೂ ದೊಡ್ಡದಾಗಿ
ಆವರಿಸಿತು, ಎಲ್ಲವನ್ನು ಮರೆಸಿತ್ತು.
ಕಣ್ಣು ಮುಚ್ಚಿದರೂ ಅದೇ ಚುಕ್ಕಿ
ಕಣ್ಣು ತೆಗೆದರು ಅದೇ ಚುಕ್ಕಿ
ಬಣ್ಣದ ಕನಸುಗಳ ಬುತ್ತಿಗಳನ್ನು ಕಟ್ಟಿ
ಮೈ ಬೆಚ್ಚಗೆ ಮಾಡಿತ್ತು, ಬದುಕಿಸಿತ್ತು.
ಒಮ್ಮೊಮ್ಮೆ ಯಂತೂ ಮಿತಿ
ಮೀರಿತ್ತು ಅದರ ವ್ಯಾಮೋಹ
ಸೂಪರ್ನೊವಾದಂತೆ ಹಗಲಿನಲ್ಲೂ
ಕಾಣಿಸಿಕೊಂಡು ರಮಿಸಿಕೊಳ್ಳುತ್ತಿತ್ತು
ಲಕ್ಷಾಂತರ ಚುಕ್ಕಿಗಳಿದ್ದರೂ, ಅದೊಂದು
ಚುಕ್ಕಿ ಮಾತ್ರ ದಿನಾ ಎದೆಯುಲ್ಲೊಂದು
ಹಾಡು ಮೂಡಿಸಿತ್ತು, ಕುಣಿಸುತ್ತಿತ್ತು
ರಾತ್ರಿ ಹಗಲೆನ್ನದೆ ಕಾಡುತ್ತಿದ್ದ ಆ ಚುಕ್ಕಿ
ಒಂದು ದಿನ ಮಾಯವಾಯಿತು.
ಆ ಚುಕ್ಕಿಯ ಸುಳಿವೇ ಇರಲಿಲ್ಲಾ,
ಉಸಿರಾಡುವ ಗಾಳಿಯೇ ವಿಷವಾದಂತೆ
ಸುಡು ಬಿಸಿಲ ದಿನಗಳೂ ಕಾರ್ಗತ್ತಲಾದಂತೆ
ಸುತ್ತಲ ಹಸಿರೆಲ್ಲವನ್ನು ಯಾರೋ ಕಿತ್ತುಕೊಂಡಂತೆ
ಎಲ್ಲವೂ ಶೂನ್ಯವಾದಂತೆ, ಅನಂತ ಮೌನ ಆವರಿಸಿತು
ಸಿಕ್ಕ ಸಿಕ್ಕವರನ್ನೆಲ್ಲಾ ಕೆಳಿದೆ, ಅಲ್ಲೊಂದು
ಸುಂದರ ಚುಕ್ಕಿ ಇತ್ತಲ್ಲಾ ಎಲ್ಲಿ ಎಂದು?
ಎಲ್ಲರೂ ನಕ್ಕಿ ಸುಮ್ಮನಾಗುತ್ತಿದ್ದರು
ಎದೆಯೊಳಗೆ ಮೂಡುತ್ತಿದ್ದ ಗಾಯ ಮಾತ್ರ
ದಿನೇ ದಿನೇ ಹೆಚ್ಚಾಗುತ್ತಲೇ ಇತ್ತು, ಮಡುಗಟ್ಟಿತ್ತು
ಎಲ್ಲಾ ನಕ್ಷತ್ರ ಪುಂಜಗಳಲ್ಲಿ
ನಿಹಾರಿಕೆಗಳಲ್ಲಿ, ಬಿಟ್ಟು ಬಿಡದೆ
ಪ್ರತಿ ರಾತ್ರಿಯು ಆ ಚುಕ್ಕಿಯನ್ನು
ಹುಡುಕುತ್ತಿರುವೆ, ಸಹಸ್ರ
ವರುಷಗಳಿಂದ ಬೆಳಗುತ್ತಿರುವ
ನಕ್ಷತ್ರ ರಾಶಿಗಳಲ್ಲಿ, ಜೀವ ಸಲೆ
ತುಂಬಿದ ಆ ಒಂದು ಬೆಳಕಿಗಾಗಿ,
ಕನಸಿಗಾಗಿ, ಪ್ರೀತಿಗಾಗಿ
ಒಲವು ಕನವರಿಸುತ್ತಲೇ ಇದೆ…
ಮನೆಯ ತಾರಸಿ ಮೇಲೆ ಇರುವ
ದೂರದರ್ಶಕ ಆಕಾಶಕ್ಕೆ ಮುಖ ಮಾಡಿ
ಗಾಳಿ, ಮಳೆ, ಚಳಿಯನ್ನದೇ ಇನ್ನೂ
ಆ ಚುಕ್ಕಿಯನ್ನು ಹುಡುಕುತ್ತಲೇ ಇದೆ…
