2030ಕ್ಕೆ ಪ್ರಳಯವಂತೆ…

ವೀಕ್ಷಕರೆ… ನಿಮಗೆ ಗೊತ್ತಾ… ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಿರುವುದು….  ಎಲ್ಲಾ ನದಿಗಳು ಉಕ್ಕಿ ಹರಿಯುತ್ತಿರುವುದು… ಅಣೆ ಕಟ್ಟೆಗಳೆಲ್ಲವೂ ಭರ್ತಿಯಾಗಿರುವುದು… ಕೆಲವು ಕಡೆ ನೆರೆಯಾಗಿ ಜನ ಜೀವನ ಅಸ್ತವ್ಯವಸ್ಥವಾಗಿರುವುದು… ಇದಕ್ಕೇಲ್ಲಾ ಏನು ಕಾರಣ ಅಂತ ಗೊತ್ತಾ… ಇಷ್ಟೂ ಅನಾಹುತಕ್ಕೆಲ್ಲಾ ಏನು ಕಾರಣ ಅಂತ ಗೊತ್ತಾ… ಮುಂದೊಂದು ದಿನ ಪ್ರಳಯವಾಗಿ ಮನುಷ್ಯನೇ ಸರ್ವನಾಶವಾಗುತ್ತಾನೆ ಗೊತ್ತಾ… ಇದಕ್ಕೆಲ್ಲಾ ಕಾರಣ ಆ…. ಒಂದು….     ವೀಕ್ಷಕರೆ…. ನಿಮಗೆ ಆಶ್ಚರ್ಯವಾಗಬಹುದು… ಈ ಕವಿಗಳೆಲ್ಲ ಹಾಡಿ ಹೊಗಳಿದ ಆ ಚಂದಮಾಮನೇ… ಭೂಮಿಯಿಂದ ಬೆಳ್ಳಗೆ ಕಾಣುವ ಆ ಚಂದ್ರನೇ ಇದಕ್ಕೆಲ್ಲಾ ಕಾರಣ… ಕಾರಣ…ಕಾರಣ… ಇದನ್ನು ನಾವು ಹೇಳುತ್ತಿಲ್ಲಾ ನಿಮಗೆ ವೀಜ್ಞಾನಿಗಳು ಹೇಳುತ್ತಿದ್ದಾರೆ…  ಚಂದ್ರ!… ಚಂದ್ರ!… ಚಂದ್ರ!… ಹೌದು ವೀಕ್ಷಕರೆ…. ವೀಜ್ಞಾನಿಗಳು ಹೇಳಿದ್ದಾರೆ, 18 ವರ್ಷಕ್ಕೊಮ್ಮೆ ಚಂದ್ರನಲ್ಲಿ ನಡೆಯುವ ವಾಲಾಟ ಇಂತಹಾ ಪರಿಣಾಮಗಳನ್ನು ಭೂಮಿಯ ಮೇಲೆ ತಂದೊಡ್ಡುತ್ತಂತೆ, ಹೆಚ್ಚು ಜನರು ಸಾಯುತ್ತಾರಂತೆ… 2030ಕ್ಕೆ ಭೂಮಿಯೇ ಪ್ರಳಯವಾಗುತ್ತಂತೆ…. ನಾವು ನೀವೆಲ್ಲರೂ ಸಾ…………”

ಹೀಗೆ, ಅವರದೇ ಅಸಂಬಧ್ಧ ನಿರೂಪಣೆಯಲ್ಲಿ, ತಲೆಬುಡ ಇಲ್ಲದೆ, ವಿಜ್ಞಾನಿಗಳು ಅಂತ ಪದ ಸೇರಿಸಿ, ಅದೇ ಪ್ರಳಯವನ್ನು ಸಮಯ ಸಿಕ್ಕಿದಾಗೆಲ್ಲಾ ಕಕ್ಕುವ ದೃಷ್ಯ ಮಾಧ್ಯಮದಲ್ಲಿನ ಸಿನಿಮೀಯ ಪ್ರವಾಹದ ದೃಷ್ಯಗಳನ್ನು ನೀವು ನೊಡಿ ಕಣ್ತುಂಬಿಕೊಂಡಿರಬಹುದು. ಮೇಲಿನ ಪದಗಳೂ ಕೂಡ ನೆನ್ನೆ ಮೊನ್ನೆಯ ಒಂದು ಕಾರ್ಯಕ್ರಮದಲ್ಲಿ ನುಡಿದ ನುಡಿಗಳು. ಈ ಕಾರ್ಯಕ್ರಮದಲ್ಲಿ, ಚಂದ್ರನೇ ಈಗ ಸುರಿಯುತ್ತಿರುವ ಧಾರಕಾರ ಮಳೆಗೆ ಕಾರಣ, ಚಂದ್ರನೆ ಪ್ರವಾಹಕ್ಕೆ ಕಾರಣ, ಚಂದ್ರನೆ 2030ರ ಪ್ರಳಯ, ಪ್ರವಾಹಕ್ಕೆ ಕಾರಣ ಎಂದು ಹೇಳಿದರಲ್ಲಾ… ಆ ಚಂದ್ರನ ಬಗ್ಗೆ ಸ್ವಲ್ಪ ಮಾತನಾಡುವ, ಅಲ್ಲಿ ಪ್ರಸ್ತಾಪಿಸಿದ ಚಂದ್ರನ ಓಲಾಟದ (Moon’s Wobble) ಬಗ್ಗೆ ಮಾತನಾಡುವ.

ಭೂಮಿಯ ಉಪಗ್ರಹ ಚಂದ್ರ

ಭೂಮಿ ಸೌರ ಮಂಡಲದ ಮೂರನೇ ಗ್ರಹ. ಅಂದರೆ, ಸೂರ್ಯನಿಂದ, ಬುಧ, ಶುಕ್ರ ಗ್ರಹದ ನಂತರ ಭೂಮಿ.  ಭೂಮಿಗೆ ಒಂದು ಉಪ ಗ್ರಹವಿದೆ, ಅದು ಚಂದ್ರ.  ಭೂಮಿ ಹೇಗೆ ಸೂರ್ಯನ ಸುತ್ತ ಸುತ್ತಿ, ತನ್ನ ಅಕ್ಷದಲ್ಲಿ ತಿರುಗುತ್ತಿದೆಯೋ, ಹಾಗೇಯೇ, ಚಂದ್ರ ಭೂಮಿಯ ಸುತ್ತ ಸುತ್ತುತ್ತಿದ್ದು, ತನ್ನ ಅಕ್ಷದ ಸುತ್ತಲೂ ತಿರುಗುತ್ತಿದ್ದಾನೆ. 

ಚಂದ್ರ ಭೂಮಿಯ ಸುತ್ತ ತಿರುಗಲು ಸುಮಾರು 27 ದಿನಗಳನ್ನು ತೆಗೆದುಕೊಳ್ಳುತ್ತಾನೆ.  ಹಾಗೆಯೇ, ತನ್ನ ಅಕ್ಷದ ಸುತ್ತ ತಿರುಗಲು ಸಹ 27 ದಿನಗಳನ್ನೇ ತೆಗೆದುಕೊಳ್ಳುತ್ತಾನೆ.  ಈ ಕಾರಣದಿಂದ ಚಂದ್ರನ ಯಾವ ಪ್ರದೇಶ ಭೂಮಿಗೆ ಮುಖ ಮಾಡಿರುತ್ತೋ, ಆ 50% ಪ್ರದೇಶವನ್ನು ಮಾತ್ರ ನಾವು ಭೂಮಿಯಿಂದ ನೋಡಬಹುದು (Near-side of the Moon). ಇದರ ವಿರುದ್ಧದ ಉಳಿದ 50% ಚಂದ್ರನ ಪ್ರದೇಶ ಭೂಮಿಯ ದಿಕ್ಕಿಗೆ ಇರದಿಲ್ಲದರಿಂದ, ಅದು ನಮಗೆ ಕಾಣುವುದಿಲ್ಲ (Far-side of the Moon). ರಾಕೆಟ್ ನಲ್ಲಿ ಹೊಗಿ, ಚಂದ್ರನನ್ನು ಸುತ್ತಿಯೇ ನೋಡಬೇಕು. ಈ ವಿಷಯ ನಿಮಗೆ ಈಗಾಗಲೇ ಗೊತ್ತಿರಬಹುದು, ಗೊತ್ತಿಲ್ಲದಿದ್ದರೂ ಈಗ ತಿಳಿದಿರಬಹುದು.  ಚಂದ್ರನ ಒಂದು ಪ್ರದೇಶ ಮಾತ್ರ ನಮಗೆ ಏಕೆ ಕಾಣುತ್ತದೆ ಎಂದು ಪ್ರಶ್ನೆ ನೀವು ಯಾರಿಗಾದರೂ ಕೇಳಿದರೆ, ಮೇಲೆ ತಿಳಿಸಿದ ಉತ್ತರ ನಿಮಗೆ ಸಿಗುತ್ತದೆ ಮತ್ತು ಇದು ಸರಿ ಉತ್ತರ ಕೂಡ ಹೌದು.  ಆದರೆ, ಈ ಉತ್ತರದಲ್ಲಿ ನಾವು ಚಂದ್ರನ ಓಲಾಡುವಿಕೆಯನ್ನು ಗಣನೆಗೆ ತೆಗೆದುಕೊಂಡಿರುವುದಿಲ್ಲ.

ಅಮಾವಾಸ್ಯೆಯಿಂದ ಮತ್ತೊಂದು ಅಮಾವಾಸ್ಯೆಯವರೆಗೆ ಚಂದ್ರನ ಬಿಂಬಾವಸ್ಥೆಯನ್ನು ನಾವು ಸೂಕ್ಷ್ಮವಾಗಿ ಗ್ರಹಿಸಿದರೆ, ಚಂದ್ರನ ಓಲಾಡುವಿಕೆಯನ್ನು ನಾವು ಗ್ರಹಿಸಬಹುದು. ಬರಿಗಣ್ಣಿನಲ್ಲಿ ಪ್ರತಿದಿನ ಚಂದ್ರನನ್ನು ನೋಡಿ ಚಂದ್ರನ ಓಲಾಡುವಿಕೆಯನ್ನು ಗಮನಿಸುವುದು ಕಷ್ಟ.  ಪ್ರತಿ ದಿನದ ಚಂದ್ರನ ಬಿಂಬಾವಸ್ಥೆಯ ಫೋಟೋ ತೆಗೆದು, ಎಲ್ಲಾ ಫೋಟೋಗಳನ್ನು ಒಂದಕ್ಕೊಂದು ಸಂಬಂಧಿಸಿದಂತೆ ಅಧ್ಯಯನ ಮಾಡಿದರೆ, ಚಂದ್ರನ ಓಲಾಡುವಿಕೆಯನ್ನು ನಾವು ಗುರುತಿಸಬಹುದು.  ಈ ಓಲಾಡುವಿಕೆಯ ಕಾರಣದಿಂದ ಭೂಮಿಯಿಂದ ಚಂದ್ರನನ್ನು ಒಂದು ಅಮಾವಾಸ್ಯೆಯಿಂದ ಮತ್ತೊಂದು ಅಮಾವಾಸ್ಯೆವರೆಗೂ ನೋಡಿದಾಗ, ಚಂದ್ರನ ಅರ್ದ ಭಾಗವಾದ 50% ಬದಲು 59% ಪ್ರದೇಶ ಭೂಮಿಗೆ ಗೊಚರವಾಗುತ್ತದೆ. ಇದು ಚಂದ್ರನ ಓಲಾಡುವಿಕೆಯಿಂದಾದ (Moon’s Wobbling) ಪರಿಣಾಮ.  ಇದೇನು ವಿಶೇಷವಾದ ವಿಷಯವಲ್ಲಾ, ಸಾಮಾನ್ಯವಾಗಿ  ಚಂದ್ರ ಭೂಮಿಯ ಸುತ್ತ ಸುತ್ತುವಾಗ ನಡೆಯುವ ಪ್ರಕ್ರಿಯೆ, ಹೆಚ್ಚಾಗಿ ಗಣನೆಗೆ ತೆಗೆದುಕೊಳ್ಳುವುದಿಲ್ಲ ಅಷ್ಟೆ.   

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಚಂದ್ರ ಭೂಮಿಯ ಸುತ್ತ ಸುತ್ತುವ ಕಕ್ಷೆಯು ಭೂಮಿ ಸೂರ್ಯನ ಸುತ್ತುವ ಕಕ್ಷೆಗೆ ಐದು ಡಿಗ್ರಿ ಓರೆಯಾಗಿದೆ (ಚಿತ್ರವನ್ನು ಗಮನಿಸಿ).  ಈ ಎರಡು ಕಕ್ಷೆಗಳು ಎರಡು ಬಿಂದುವಿನಲ್ಲಿ ಸಂಧಿಸುತ್ತವೆ. ಇದನ್ನು ನೋಡ್ N1 ಮತ್ತು N2 ಎಂದು ಕರೆಯಬಹುದು.  ಚಂದ್ರನ ಓಲಾಡುವಿಕೆಯಿಂದ, ಈ ಬಿಂದುವು ಕೂಡ ಸುತ್ತುತ್ತದೆ.  ಈ ಬಿಂದುಗಳು ಒಂದು ಸುತ್ತು ಸುತ್ತಲು 18.6 ವರ್ಷಗಳು ಬೇಕು ಇದನ್ನು ಲೂನಾರ್ ಸ್ಟ್ಯಾಂಡ್ ಸ್ಟಿಲ್ (Lunar Standstill)  ಎಂದು ಕರೆಯುತ್ತಾರೆ. 

ಸಮುದ್ರದ ಅಲೆಗಳ ಉಬ್ಬರ-ಇಳಿತ

ಸಾಮಾನ್ಯವಾಗಿ ನಿಮಗೆಲ್ಲಾ ತಿಳಿದಿರಬಹುದು, ಭೂಮಿಯ ಸಮುದ್ರದಲ್ಲಿ ಅಲೆಗಳ ಉಬ್ಬರ-ಇಳಿತಗಳಿಗೆ ಚಂದ್ರನೇ ಕಾರಣ ಎನ್ನುವುದು.  ಹೌದು, ಚಂದ್ರ ಮತ್ತು ಭೂಮಿಯ ಗುರುತ್ವಾಕರ್ಷಣ ಬಲ ಇದಕ್ಕೆ ಕಾರಣವಾಗಿದೆ.  ಚಂದ್ರ ತನ್ನ ಗುರುತ್ವಾಕರ್ಷಣ ಬಲದಿಂದ ತನ್ನ ಹತ್ತಿರವಿರುವ ಭೂ ಬಾಗದ ಪ್ರದೇಶವನ್ನು ತನ್ನತ್ತ ಎಳೆಯುತ್ತದೆ, ಜೊತೆಗೆ, ಈ ಪ್ರದೇಶದ ವಿರುದ್ಧ ದಿಕ್ಕಿನಲ್ಲಿರುವ ಭೂ ಭಾಗವನ್ನು ತನ್ನತ್ತ ಎಳೆಯುತ್ತಿರುತ್ತದೆ.  ಆದರೆ, ಚಂದ್ರನ ಗುರುತ್ವ ಬಲ ತನ್ನ ಹತ್ತಿರವಿರುವ ಭೂ ಬಾಗಕ್ಕೆ ಹೆಚ್ಚಿದ್ದು, ದೂರ ಇರುವ (ವಿರುದ್ಧ ದಿಕ್ಕಿನಲ್ಲಿ) ಬಾಗದಲ್ಲಿ ಕಡಿಮೆ ಇರುತ್ತದೆ (ಚಿತ್ರಗಳನ್ನು ಗಮನಿಸಿ).  ಈ ಗುರುತ್ವ ಬಲದ ವ್ಯತ್ಯಾಸದಿಂದ, ಭೂಮಿಯಲ್ಲಿನ ಸಾಗರಗಳಲ್ಲಿ ಅಲೆಗಳ ಉಬ್ಬರ-ಇಳಿತಗಳಿರುತ್ತವೆ. ಇದನ್ನೇ ಟೈಡ್ (Tide) ಎಂದು ಕರೆಯುತ್ತಾರೆ. 

ಸಾಮಾನ್ಯವಾಗಿ ಹುಣ್ಣಿಮೆ ಮತ್ತು ಅಮವಾಸ್ಯೆಯಂದು, ಸೂರ್ಯ ಭೂಮಿ ಮತ್ತು ಚಂದ್ರನ ಸ್ಥಾನದಿಂದ, ಸಮುದ್ರದಲ್ಲಿ ಅಲೆಯ ಉಬ್ಬರಗಳು ಹೆಚ್ಚಿರುತ್ತವೆ. ಈ ಅಲೆಗಳ ಉಬ್ಬರ ಸಾಮಾನ್ಯವಾಗಿ ನಡೆಯುವ ಪ್ರಕ್ರಿಯಾದರೂ, ಕಡಲಿನ ಕಿನಾರೆಯಲ್ಲಿ ಇತರೆ ಕಾರಣಗಳಿಂದ ನಡೆಯುತ್ತಿರುವ ಮಾನವನ ಅವೈಜ್ಞಾನಿಕ ಕಾಮಗಾರಿಗಳು/ ಅಭಿವೃದ್ಧಿಯ ಹೆಸರಲ್ಲಿ ನಿಸರ್ಗ ಸಂಬಂಧಿತ ವಿದ್ಯಮಾನದ ಬಗ್ಗೆ ಅರಿವಿಲ್ಲದಿರುವುದರಿಂದ, ಅನೇಕ ಅನಾಹುತಗಳು ನಡೆದಿರುವುದಂತು ಸತ್ಯ.

2030ಕ್ಕೆ ಸಮುದ್ರದ ಅಲೆಗಳ ಉಬ್ಬರ ಹೆಚ್ಚುತ್ತದೆ, ಪ್ರಳಯವಾಗುತ್ತಾ?

ನೇಚರ್ ಕ್ಲೈಮಾಟ್ ಚೆಂಚ್ ನ ಜರ್ನಲ್ ನಲ್ಲಿ ಪ್ರಕಟವಾದ ಒಂದು ಅಧ್ಯಯನ ಹೀಗಿದೆ.  2030ಕ್ಕೆ ಕರಾವಳಿ ಪ್ರದೇಶದಲ್ಲಿ ಪ್ರವಾಹದ ಉಲ್ಬಣ ಈಗಿರುವ ಮಿತಿಗಿಂತಲೂ ಹೆಚ್ಚಾಗಿರುತ್ತದೆ. ಇದರಿಂದ ಕರಾವಳಿ ಭಾಗದ ನಗರಗಳಲ್ಲಿ ಪ್ರವಾಹ ಸ್ಥಿತಿ ಉಲ್ಬಣವಾಗುತ್ತದೆ ಎಂದು ವರದಿಯಾಗಿದೆ. 

ಚಂದ್ರನ ಕಾರಣದಿಂದ ಭೂಮಿಯ ಮೇಲೆ ನಡೆಯುವ ಸಾಗರಗಳ ಉಬ್ಬರಗಳು ಚಂದ್ರನ ಓಲಾಡುವಿಕೆಯ 18.6 ವರ್ಷಗಳ ಚಕ್ರಗಳಲ್ಲಿ ಕೆಲವೊಮ್ಮೆ ಹೆಚ್ಚಬಹುದು, ಕಡಿಮೆಯಾಗಬಹುದು ಮತ್ತು ಈ ರೀತಿ ಆಗುವುದು ಸಾಮಾನ್ಯ ಪ್ರಕ್ರಿಯೆಯಾಗಿದೆ.  ಆದರೆ, ಈ ಅಧ್ಯಯನದ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ಭೂಮಿಯಲ್ಲಿನ ಹವಾಮಾನ ಬದಲಾವಣೆ ಅತ್ಯಂತ ಅಪಾಯಕಾರಿಯಾಗಿದ್ದು, ಈ ಅನಿಯಂತ್ರಿತ ವಿದ್ಯಮಾನವು ಚಂದ್ರನ ಓಲಾಡುವಿಕೆಯ ಜೊತೆ ಸಂಯೋಜನೆಗೊಂಡರೆ, ಸಾಗರದ ಅಲೆಗಳ ಉಬ್ಬರಗಳು ತೀವ್ರವಾಗಿರುತ್ತವೆ.  ಈ ಕಾರಣದಿಂದ 2030ಕ್ಕೆ ಕಡಲ ಕಿನಾರೆಯ ನಗರಗಳಲ್ಲಿ ತೀವ್ರ ಪ್ರವಾಹ ಸ್ಥಿತಿ ಉಂಟಾಗಬಹುದು ಎಂದು ಹೇಳಿರುವುದ.  ಇಂತಹ ಅಧ್ಯಯನಗಳು ಭೂಮಿಯಲ್ಲಿ ನಡೆಯುತ್ತಿರುವ ಹವಾಮಾನ ಬದಲಾವಣೆಯ ಬಗ್ಗೆ ಬೆಳಕು ಚೆಲ್ಲುತ್ತಿದ್ದು, ಎಲ್ಲಾ ರಾಷ್ಟ್ರಗಳೂ ನಿಸರ್ಗ ಕೇಂದ್ರಿತ ನೀತಿ ನಿಯಮಗಳನ್ನು ಅಳವಡಿಸಿಕೊಳ್ಳಲೇ ಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ಆದರೆ, ಬರ ಎಂದರೇ ಎಲ್ಲರಿಗೂ ಇಷ್ಟ ಎಂಬ ಪಿ ಸಾಯಿನಾಥ್ ರವರ ಮಾತಿನಂತೆ, ಸರಿ ಸುಮಾರು ಎಲ್ಲಾ ರಾಷ್ಟ್ರಗಳೂ ಈ ವಿಷಯಗಳ ಬಗ್ಗೆ ಕಿವುಡಾಗಿವೆ. ಇದರ ಜೊತೆಗೆ, ಪ್ರವಾಹ, ಪ್ರಳಯವೇ ತಮಗೆ ಇಷ್ಟ ಎಂಬಂತೆ ನುಡಿಯುವ, ನೆಡೆಯುವ ದೃಷ್ಯ ಮಾಧ್ಯಮಗಳಂತು, ಈ ಅಧ್ಯಯನದ ವರದಿಯನ್ನು ಅರೆ-ಬರೆಯಾಗಿ ಓದಿಕೊಂಡು, ಈಗ ಪ್ರಪಂಚಲ್ಲಿ ಆಗುತ್ತಿರುವ ಮಳೆಗೆ ಚಂದ್ರನೇ ಕಾರಣ, 2030ಕ್ಕೆ ಪ್ರಳಯವೇ ಆಗಿಹೊಗುತ್ತದೆ ಎಂದು ಜನರನ್ನು ಭಯ ಪಡಿಸಲು ಜೊರಾಗಿ ಅರಚುವವರಿಗೆ ಏನೇಳಬೇಕೋ ತಿಳಿಯದು.

ಚಂದ್ರನ ಓಲಾಡುವಿಕೆಯ ವಿಡಿಯೋ:

ಬದುಕಿನ ಕಡಲು

ಓ ಕಡಲೇ, ಎಲ್ಲಿಂದ ತರುತಿರುವೆ
ಈ ಏರುತಿರುವ ಅಲೆಗಳನ್ನು?
ದೃಷ್ಠಿ ಹರಿಯುವ ತನಕ ಸಮನಾಗಿದ್ದು
ಹತ್ತಿರ ಬಂದಾಗ ಏರುತಿರುವೆ ಏಕೆ?

ಕಾಣದ ಅಂಚಿನಿಂದ ಬರುತಿಹುದು
ನೋವು ನಲಿವಿನ ಅಲೆಗಳು;
ಪ್ರೀತಿ ಧ್ವೇಷದ ಅಲೆಗಳು;
ಬದುಕು ಸಾವಿನ ಅಲೆಗಳು;
ಹಂಚುತಿರುವೆ ಸಮನಾಗಿ
ಯಾರಿಗೂ ಭೇದ ಭಾವ ತೋರದೆ.

ಮೋಡಗಳ ತುದಿಗೆ ಕಿರಣಗಳು ತಾಗಿ
ಹೊಳೆಯುತಿಹುದು ಹೊನ್ನಿನ ಬೆಳಕು,
ಮನಸ್ಸಿನ ಕತ್ತಲೆಯ ರಾಢಿಗೊಳಿಸಿ
ಒಳಗೆ ಮೂಡಿಸಿತು ಬಣ್ಣದ ಕನಸು.

ಹೊಸ ದಿನಕ್ಕೆ ತಯಾರಾಗುವ ಸೂರ್ಯ
ಕಡಲ ಚುಂಬಿಸಿ ಹೊರಟಿಹನು,
ನಮ್ಮಯ ನಾಳೆಯ ಬದುಕಿಗೆ
ಹೊಸ ಚೇತನವ ಮೂಡಿಸಿ ಹೊರಟಿಹನು.

ಅಲೆಯ ಏರುಪೇರುಗಳರಿತು
ಬಾಳುವುದೇ ನನ್ನಿ ಜೀವನ.
ಎಲ್ಲವೂ ಸಮನಾಗಿ ಸ್ವೀಕರಿಸಿ
ಮುಂದೆ ಸಾಗುವುದೇ ಮನುಜ ಮತ;
ಇದೇ ವಿಶ್ವ ಪಥ!

ಓ ಕಡಲೇ, ಎಲ್ಲಿಂದಲಾದರೂ
ಹೇಗಾದರೂ ತರುತಿರು ಅಲೆಗಳ,
ಕಾಣದ ಅಂಚಿಗೆ ತುಡಿಯುವ ಮನಸ್ಸಿಗೆ
ನಿನ್ನ ಈ ಅಲೆಗಳೇ ಸ್ಪೂರ್ತಿ.

ಪ್ರೀತಿ

ನಾನು
ಯಾವ ಧರ್ಮಕ್ಕೂ ಸೇರಿದವನಲ್ಲಾ;
ಎಲ್ಲಾ ಧರ್ಮಕ್ಕೂ ಸೇರಿದವನು

ನಾನು
ಯಾವ ಧರ್ಮದ ಪರವೂ ಇಲ್ಲಾ
ಎಲ್ಲಾ ಧರ್ಮದ ಜೀವದ ಪರ

ನಾನು
ಒಂದು ಧರ್ಮವೇ;
ಒಂದು ಗ್ರಂಥವೇ;
ಒಂದು ಭಾಷೆಯೇ;
ಒಬ್ಬ ದೊರೆಯೇ;
ಶ್ರೇಷ್ಠವೆಂಬ ಸಟೆಯನ್ನು
ಒಪ್ಪುವುದಿಲ್ಲಾ

ನಾನು
ಬ್ರಾಹ್ಮಣ್ಯವೇ ಯುಕ್ತಿ;
ಕ್ಷತ್ರಿಯವೇ ಶಕ್ತಿ;
ವೈಶ್ಯವೇ ವ್ಯವಹಾರ;
ಶೂದ್ರವೇ ಸೇವೆ;
-ವೆಂಬ ನನ್ನೊಳಗಿನ ‘ವರ್ಣ’ರಂಜಿತ
‘ಮನು’ವನ್ನು ಕೊಂದಿದ್ದೇನೆ

ನಾನು
ರಾಮನನ್ನು ನಂಬುವುದಿಲ್ಲಾ;
ಅಲ್ಲಾಹುನನ್ನು ನಂಬುವುದಿಲ್ಲಾ;
ಏಸುನನ್ನು ನಂಬುವುದಿಲ್ಲಾ;
ನಂಬಿರುವುದು ಶರಣನಾದ
ಜಲಗಾರನನ್ನೇ; ಎಲ್ಲರೂ ಅವನೇ

ನಾನು
ಈ ದೇಶದಲ್ಲಿಲ್ಲಾ:
ಆ ದೇಶದಲ್ಲಿಲ್ಲಾ;
ಇರುವ ನೆಲವೆ ಒಂದು ರಾಷ್ಟ್ರ,
ನುಡಿವ ನುಡಿಯೇ ರಾಷ್ಟ್ರಭಾಷೆ,
ಹಾಡುವ ಹಾಡೇ ರಾಷ್ಟ್ರಗೀತೆ,
ಉಡುವ ಅಂಗಿಯೇ ರಾಷ್ಟ್ರಬಾವುಟ

ನಾನು
ಗುಡಿ, ಚರ್ಚು, ಮಸೀದಿಗಳಲಿಲ್ಲಾ;
ಪಾರ್ಲಿಮೆಂಟಿನಲ್ಲಿಲ್ಲಾ;
ಜ್ಞಾನಿಯಲ್ಲಾ, ಜವಾನನಲ್ಲಾ,
ರೈತನಲ್ಲಾ, ಸೈನಿಕನಲ್ಲಾ;
ಎಲ್ಲರೊಳಗಿರುವ ಬುದ್ಧ

ಇಂದು
ನಾನು
ಬದುಕಿಲ್ಲಾ;
ಬದುಕಿದ್ದರೆ, ಪ್ರೀತಿಯಲ್ಲಿ ಮಾತ್ರ
ಸತ್ತರೆ, ಭೂಮಿಯೇ ರಣರಂಗ

ಇಂತಿ ನಿಮ್ಮ ನಾನು