
ಕವಿತೆಯ ನಡಿಗೆ



ಕಣ್ಣಂಚಿನ ಹನಿಯು ಹೇಳುತಿದೆ
ನಾ ನಿನ್ನ ಕಂಡೆ ಎಂದು
ತುಟಿಯಂಚಿನ ನಗುವು ಹೇಳುತಿದೆ
ನಾ ನಿನ್ನ ಬಲ್ಲೆ ಎಂದು
ರಾತ್ರಿಯ ಕನಸೆಲ್ಲವೂ ಹೇಳುತಿದೆ
ನೀ ನನ್ನ ಕನಸು ಎಂದು
ಪ್ರತಿ ಹೃದಯದ ಬಡಿತ ಹೇಳುತಿದೆ
ನೀ ನನ್ನ ಜೀವ ಎಂದು
ನನ್ನ ಪ್ರೀತಿಯ ಮನಸ್ಸು
ಕೂಗಿ ಕೂಗಿ ಹೇಳುತಿದೆ
ಇಲ್ಲಿ ಯಾರು ಇಲ್ಲ ಎಂದು
ಆ ಎರಡು ಸಾಲುಗಳು
ಎಷ್ಟು ನೆನೆದರು ನೆನಪಿಗೆ ಬರುತ್ತಿಲ್ಲ
ಯಾರು ಎಲ್ಲಿಗೆ ಕರೆದೊದರೊ?
ಎಲ್ಲಿ ಕಷ್ಟಗಳುನುಭವಿಸುತ್ತಿವೆಯೋ?
ಯಾವ ಧುರುಳರಡಿಯಲಿ ಸಿಲುಕಿ ನರಳುತ್ತಿವೆಯೋ?
ಕರೆದೊದರೊ, ಕದ್ದೊದರೋ,
ಒದ್ದೋದರೋ, ತುಳಿದೊದರೊ, ಗೊತ್ತಿಲ್ಲ.
ಆ ಸಾಲುಗಳ ಕಣ್ಮರೆಗೆ ಅಲ್ಲಿರುವ ದೊರೆಯೇ,
ಅವನ ಭಕ್ತರೇ ಕಾರಣ ಎಂಬ ಆ
ಹುಚ್ಚನ ಪಠಣ ಯಾರು ಕೇಳಿಯಾರು?
ಎಲ್ಲರೂ ಹುಚ್ಚರಾಗುವ ಬದಲು ಭಕ್ತರಾಗುತ್ತಿರುವುದನ್ನ
ಸಾರಿ ಸಾರಿ ಹೇಳಿದ ಅಲ್ಲಿದ್ದ ಯೋಗಿಯೊಬ್ಬ…
ಹೀಗಿರುವಾಗ, ಅಲ್ಲೆಲ್ಲೋ….
ಹುಣ್ಣಿಮೆ ಬೆಳಕ ಮರೆಯಲ್ಲಿ
ನಿಂತ ಪ್ರೀತಿ ಅತ್ತಿತ್ತ ನೋಡುತ್ತಾ,
ಕಣ್ಣು ಮಿಟಿಕಿಸುತ್ತ, ಎಲ್ಲರ ಕಣ್ತಪ್ಪಿಸಿ,
ಆ ಎರಡು ಸಾಲುಗಳ ಹುಡುಕುತ್ತಿತ್ತು.
ನಾನು
ಯಾವ ಧರ್ಮಕ್ಕೂ ಸೇರಿದವನಲ್ಲಾ;
ಎಲ್ಲಾ ಧರ್ಮಕ್ಕೂ ಸೇರಿದವನು
ನಾನು
ಯಾವ ಧರ್ಮದ ಪರವೂ ಇಲ್ಲಾ
ಎಲ್ಲಾ ಧರ್ಮದ ಜೀವದ ಪರ
ನಾನು
ಒಂದು ಧರ್ಮವೇ;
ಒಂದು ಗ್ರಂಥವೇ;
ಒಂದು ಭಾಷೆಯೇ;
ಒಬ್ಬ ದೊರೆಯೇ;
ಶ್ರೇಷ್ಠವೆಂಬ ಸಟೆಯನ್ನು
ಒಪ್ಪುವುದಿಲ್ಲಾ
ನಾನು
ಬ್ರಾಹ್ಮಣ್ಯವೇ ಯುಕ್ತಿ;
ಕ್ಷತ್ರಿಯವೇ ಶಕ್ತಿ;
ವೈಶ್ಯವೇ ವ್ಯವಹಾರ;
ಶೂದ್ರವೇ ಸೇವೆ;
-ವೆಂಬ ನನ್ನೊಳಗಿನ ‘ವರ್ಣ’ರಂಜಿತ
‘ಮನು’ವನ್ನು ಕೊಂದಿದ್ದೇನೆ
ನಾನು
ರಾಮನನ್ನು ನಂಬುವುದಿಲ್ಲಾ;
ಅಲ್ಲಾಹುನನ್ನು ನಂಬುವುದಿಲ್ಲಾ;
ಏಸುನನ್ನು ನಂಬುವುದಿಲ್ಲಾ;
ನಂಬಿರುವುದು ಶರಣನಾದ
ಜಲಗಾರನನ್ನೇ; ಎಲ್ಲರೂ ಅವನೇ
ನಾನು
ಈ ದೇಶದಲ್ಲಿಲ್ಲಾ:
ಆ ದೇಶದಲ್ಲಿಲ್ಲಾ;
ಇರುವ ನೆಲವೆ ಒಂದು ರಾಷ್ಟ್ರ,
ನುಡಿವ ನುಡಿಯೇ ರಾಷ್ಟ್ರಭಾಷೆ,
ಹಾಡುವ ಹಾಡೇ ರಾಷ್ಟ್ರಗೀತೆ,
ಉಡುವ ಅಂಗಿಯೇ ರಾಷ್ಟ್ರಬಾವುಟ
ನಾನು
ಗುಡಿ, ಚರ್ಚು, ಮಸೀದಿಗಳಲಿಲ್ಲಾ;
ಪಾರ್ಲಿಮೆಂಟಿನಲ್ಲಿಲ್ಲಾ;
ಜ್ಞಾನಿಯಲ್ಲಾ, ಜವಾನನಲ್ಲಾ,
ರೈತನಲ್ಲಾ, ಸೈನಿಕನಲ್ಲಾ;
ಎಲ್ಲರೊಳಗಿರುವ ಬುದ್ಧ
ಇಂದು
ನಾನು
ಬದುಕಿಲ್ಲಾ;
ಬದುಕಿದ್ದರೆ, ಪ್ರೀತಿಯಲ್ಲಿ ಮಾತ್ರ
ಸತ್ತರೆ, ಭೂಮಿಯೇ ರಣರಂಗ
ಇಂತಿ ನಿಮ್ಮ ನಾನು