ಹೊಸ ವಿಕಿರಣ!

I propose this evening to speak to you on a new kind of radiation or light-emission from atoms and molecules…

ಅಲ್ಲಿಯೇ ಟೇಬಲ್ ಮೇಲೆ ಇದ್ದ ಒಂದು ಬಾಟಲ್ ತೋರಿಸಿ, ಈ ಬಾಟಲ್ ನಲ್ಲಿ ನೀರಿದೆ ಮತ್ತು ತುಂಬ ಕಡಿಮೆ ಪ್ರಮಾಣದ ಪ್ಲೋರೋಸಿನ್ ಅನ್ನು ಕರಗಿಸಲಾಗಿದೆ.  ಈಗ ಈ ಬಾಟಲ್ ಅನ್ನು ಕಂದೀಲಿನ (ಲಾಟೀನು/ ಲಾಂದ್ರ) ಬೆಳಕಿನ ರೇಖೆಯಲ್ಲಿಟ್ಟರೆ, ಈ ಬಾಟಲಿನ ನೀರು ಹಸಿರು ಬಣ್ಣದಲ್ಲಿ ಹೊಳೆಯುತ್ತದೆ.  ಅಲ್ಲದೆ, ಬಾಟಲ್ ಮತ್ತು ಕಂದೀಲಿನ ನಡುವೆ ಈ ರೀತಿ ವಿವಿಧ ರೀತಿಯ ಬಣ್ಣದ ಶೋಧಕಗಳನ್ನು ಇರಿಸಿದರೂ ಸಹ ಬಾಟಲ್‌ನ ನೀರು ಹಸಿರು ಬಣ್ಣದಲ್ಲಿಯೇ ಇರುತ್ತದೆ…

ಈಗೆ ವಿವಿಧ ರೀತಿಯ ದ್ವಿತೀಯ ವಿಕಿರಣಗಳ (Secondary Radiation) ಅಸ್ತಿತ್ವದ ಬಗ್ಗೆ ಹಲವು ಪ್ರಯೋಗಗಳನ್ನು ಮಾಡುತ್ತಾ ಉಪನ್ಯಾಸವನ್ನು ನೀಡ ತೊಡಗಿದರು.  

ಇದು 1928 ಮಾರ್ಚ್ 16ರಂದು ಬೆಂಗಳೂರಿನಲ್ಲಿ ನಡೆದ ಸೌಥ್ ಇಂಡಿಯನ್ ಸೈನ್ಸ್ ಅಸೊಸಿಯೇಷನ್ ಸಮ್ಮೇಳನದ ಉದ್ಘಾಟನಾ ಉಪನ್ಯಾಸದ ತುಣುಕು.  ಅಂದಿಗೆ ಸೆಂಟ್ರಲ್ ಕಾಲೇಜಾಗಿದ್ದ ಈಗಿನ ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯದಲ್ಲಿನ ರಾಮನ್ ಹಾಲ್ ಎಂದೇ ಕರೆಸಿಕೊಳ್ಳುವ ಕೊಠಡಿಯಲ್ಲಿ ಅಂದು ಸರ್ ಸಿ. ವಿ. ರಾಮನ್ ಈ ಉಪನ್ಯಾಸ ನೀಡಿದ್ದರು. 1928ರ ಫೆಬ್ರವರಿ 28 ರಂದು ಕಲ್ಕತ್ತಾದ ಇಂಡಿಯನ್ ಅಸೊಸಿಯೇಷನ್ ಫರ್ ದಿ ಕಲ್ಟಿವೇಶನ್ ಆಫ್ ಸೈನ್ಸ್ ಕೇಂದ್ರದಲ್ಲಿ ಕೈಗೊಂಡಿದ್ದ ಪ್ರಯೋಗದಲ್ಲಿ ಪಲಿತಾಂಶ ಕಂಡುಕೊಂಡಿದ್ದ ರಾಮನ್ ಮೊದಲನೇ ಬಾರಿಗೆ ತಾವೇ ಉಪನ್ಯಾಸ ನೀಡಿ, ಪ್ರಯೋಗದ ರೂಪುರೇಷು ಮತ್ತದರ ಪಲಿತಾಂಶವನ್ನು ಜಗತ್ತಿಗೆ ಪರಿಚಯಿಸಿದ್ದು ಬೆಂಗಳೂರಲ್ಲೇ… ಇದೇ ರಾಮನ್ ಹಾಲ್‌ನಲ್ಲಿಯೇ (ಪ್ರಯೋಗದ ಪ್ರಕಟಣೆಗಳನ್ನು ಹೊರತುಪಡಿಸಿ).

ಬೆಂಗಳೂರು ಸಿಟಿ ವಿಶ್ವವಿದ್ಯಾನಿಲಯದ ಇಂದಿನ  ಸಿ. ವಿ. ರಾಮನ್ ಹಾಲ್ | ಕೃಪೆ: ಬೆಂಗಳೂರು ಮಿರರ್

ಸರ್ ಸಿ. ವಿ. ರಾಮನ್ ತಿರುಚುನಾಪಲ್ಲಿಯ ತಿರುವನೈಕ್ಕಾವಲ್‌ನಲ್ಲಿ 1888ರ ನವೆಂಬರ್ ೦7 ರಂದು ಜನಿಸಿದರು. ತಾಯಿ ಪಾರ್ವತಿ ಅಮ್ಮಾಲ್, ತಂದೆ ಚಂದ್ರಶೇಖರ್ ಐಯ್ಯರ್. ಇವರಿಗೆ ಐದು ಗಂಡು ಮಕ್ಕಳು ಮತ್ತು ಮೂರು ಹೆಣ್ಣು ಮಕ್ಕಳು. ರಾಮನ್ ಎರಡನೇಯವರು.  ರಾಮನ್ ರವರ ತಂದೆ ಶಾಲಾ ಶಿಕ್ಷಕರಾಗಿದ್ದು ಭೌತ ವಿಜ್ಞಾನ, ಗಣಿತ ಮತ್ತು ತತ್ವ ವಿಜ್ಞಾನ ಹಾಗೂ ಸಂಗೀತದಲ್ಲಿ ಬಹಳಾ ಆಸಕ್ತಿ ಹೊಂದಿದ್ದರು. 1892 ರಲ್ಲಿ ಇವರಿಗೆ ವಿಶಾಕಾಪಟ್ಟಣಕ್ಕೆ ವರ್ಗಾವಣೆ ಆದ ಕಾರಣ, ರಾಮನ್‌ರವರ ಪ್ರಾಥಮಿಕ ವಿದ್ಯಾಭ್ಯಾಸ ವಿಶಾಕಾಪಟ್ಟಣದಲ್ಲಿಯೇ ನಡೆಯಿತು. ರಾಮನ್ ತಮ್ಮ 11 ನೇ ವಯ್ಯಸ್ಸಿನಲ್ಲಿಯೇ ಮೆಟ್ರಿಕುಲೇಷನ್ ಪಾಸ್ ಮಾಡಿ ಈಗಿನ ಪಿ.ಯು.ಸಿ. ಪರೀಕ್ಷೆಗೆ ಸಮನಾಗಿದ್ದ ಎಫ್.ಎ. ಪರೀಕ್ಷೆಯಲ್ಲಿ ಅಂದಿನ ಆಂದ್ರ ಪ್ರದೇಶದ ರಾಜ್ಯಕ್ಕೆ ಪ್ರಥಮರಾಗಿ ತೇರ್ಗಡೆ ಹೊಂದಿದ್ದರು.

ತದನಂತರ ರಾಮನ್‌ರ ಕುಟುಂಬ ಮದ್ರಾಸ್‌ಗೆ (ಈಗಿನ ಚನೈ) ವರ್ಗಾವಣೆಗೊಂಡಾಗ, ರಾಮನ್ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಭೌತ ವಿಜ್ಞಾನ & ಇಂಗ್ಲೀಷ್‌ನಲ್ಲಿ ಬಿ.ಎ. ಪದವಿಯನ್ನು ಚಿನ್ನದ ಪದಕದೊಂದಿಗೆ ಪಡೆದರು.  ಅಷ್ಠೊತ್ತಿಗೆ ರಾಮನ್ ವಿಜ್ಞಾನದ ಹಲವು ವಿಷಯಗಳ ಬಗ್ಗೆ ಚಿಂತಿಸಿ ವಿಚಾರ ಮಾಡುತ್ತಿದ್ದರು. ಅಲ್ಲದೆ, 1906 ರಲ್ಲಿಯೇ ತಮ್ಮ ಮೊದಲನೇ ವಿಜ್ಞಾನ ಲೇಖನವನ್ನು ಬ್ರೀಟೀಷ್ ಜರ್ನಲ್ ಆದ ಫಿಲಾಸೋಫಿಕಲ್ ಮ್ಯಾಗಝಿನ್ ನಲ್ಲಿ ಪ್ರಕಟಿಸಿದರು.  ತದನಂತರ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಎಂ. ಎ. ಪದವಿಯನ್ನೂ ಪಡೆದು, ತಮ್ಮ ಎರಡನೇ ವಿಜ್ಞಾನ ಸಂಶೋಧನಾ ಲೇಖನವನ್ನು ದ್ರವಗಳ ಮೇಲ್ಮೆ ಎಳೆತದ (Surface Tension) ವಿಷಯದ ಮೇಲೆ ಪ್ರಕಟಿಸಿದರು. ಇದಾದನಂತರ, ರಾಮನ್ ಸಿವಿಲ್ ಸರ್ವಿಸ್ ಪರೀಕ್ಷೆಯನ್ನು ಪಾಸ್ ಮಾಡಿ ಹಣಾಕಾಸು ಇಲಾಖೆಯಲ್ಲಿ ಕೆಲಸವನ್ನು ಪಡೆದರು. ಇದರ ಮಧ್ಯೆ, ರಾಮನ್ ತಮ್ಮ 13 ನೇ ವಯ್ಯಸ್ಸಿನಲ್ಲಿಯೇ ವೀಣೆಯಲ್ಲಿ ತ್ಯಾಗರಾಜರ ಕೀರ್ತನೆಗಳನ್ನು ನುಡಿಸುತ್ತಿದ್ದ ‘ಲೋಕಸುಂದರಿ’ ಎಂಬ ಹುಡುಗಿಗೆ ಮನಸ್ಸೊಪ್ಪಿಸಿ, ಮದುವೆಯಾಗಿದ್ದರು.

ಸಿವಿಲ್ ಸರ್ವಿಸ್ ಪರೀಕ್ಷೆಯಿಂದ ಕೆಲಸ ಪಡೆದಿದ್ದ ರಾಮನ್, 1907 ರಲ್ಲಿ ಕಲ್ಕಾತ್ತಾಗೆ ತೆರಳಿ ಹಣಕಾಸು ಇಲಾಖೆಯಲ್ಲಿ ಸಹಾಯಕ ಮಹಾಲೇಖಪಾಲರಾಗಿ ಕೆಲಸ ನಿರ್ವಹಿಸಲು ಪ್ರಾರಂಭಿಸಿದರು.  ಪ್ರತಿ ದಿನ ಕಛೇರಿಗೆ ತೆರಳಬೇಕಾಗದರೆ, ಕಾಣಸಿಗುತ್ತಿದ್ದ ಇಂಡಿಯನ್ ಅಸೋಸಿಯೇಷನ್ ಫಾರ್ ದಿ ಕಲ್ಟಿವೇಷನ್ ಆಫ್ ಸೈನ್ಸ್ (Indian Association for the Cultivation of Science- IACS) ಸಂಸ್ಥೆಯನ್ನು ಕಂಡು, ತಾವು ಅಧ್ಯಯನ ಮಾಡಬೇಕು ಎಂದು ಕೊಂಡಿದ್ದ ವಿಜ್ಞಾನ ವಿಷಯಗಳ ಮೇಲೆ ಆ ಸಂಸ್ಥೆಯಲ್ಲಿನ ಪ್ರಯೋಗಾಲಯದಲ್ಲಿ ಪ್ರಯೋಗಗಳನ್ನು ಮಾಡಬೇಕು ಎಂದು ಯೋಚಿಸಿದ್ದರು. ಕೊನೆಗೂ ಅನುಮತಿಯನ್ನು ಪಡೆದು ಕಛೇರಿಯ ಸಮಯವಲ್ಲದೆ, ಇತರ ಸಮಯಗಳಲ್ಲಿ ತಮ್ಮ ಪ್ರಯೋಗಗಳನ್ನು IACS ಸಂಸ್ಥೆಯಲ್ಲಿ ಕೈಗೊಂಡರು. ಅಲ್ಲದೆ ಕಲ್ಕಾತ್ತಾ ವಿಶ್ವವಿದ್ಯಾನಿಲಯದ ಆಹ್ವಾನದ ಮೇರೆಗೆ, ತಮ್ಮ ಹಣಕಾಸು ಇಲಾಖೆಯ ಸಹಾಯಕ ಮಹಾಲೇಖಪಾಲರ ವೃತ್ತಿಯನ್ನು ಬಿಟ್ಟು, ಹೆಸರಾಂತ ಪಲಿಟ್ ಪ್ರೊಫೆಸರ್ ಆಫ್ ಪಿಸಿಕ್ಸ್ರಾಗಿ ಕಲ್ಕತ್ತಾ ವಿಶ್ವವಿದ್ಯಾನಿಲಯಕ್ಕೆ ಸೇರಿದರು.

ರಾಮನ್ ಭೌತ ವಿಜ್ಞಾನ ಪ್ರೊಫೆಸರ್ ಆಗಿ ಹಾಗು IACS ಸಂಸ್ಥೆಯ ಗೌರವ ಕಾರ್ಯದರ್ಶಿಗಳೂ ಆಗಿ ತಮ್ಮ ಅಧೀನದಲ್ಲಿದ್ದ ಎರಡು ಪ್ರಯೋಗಾಲಯಗಳನ್ನು ನಿರ್ವಹಿಸಿತ್ತಾ ಅನೇಕ ಪ್ರಯೋಗಗಳನ್ನು ನಡೆಸುತ್ತಿದ್ದರು. ರಾಮನ್ ತಮ್ಮ ಕಾರ್ಯದರ್ಶಿಯ ಅವಧಿಯಲ್ಲಿಯೇ IACS ಸಂಸ್ಥೆಯಲ್ಲಿ ನಿರ್ವಹಿಸಿದ ಪ್ರಯೋಗಗಳ ಪಲಿತಾಂಶಗಳನ್ನು ವಿಜ್ಞಾನ ಪ್ರಪಂಚಕ್ಕೆ ತಿಳಿಸಲು ಪ್ರೊಸಿಡಿಂಗ್ಸ್ ಆಫ್ IACS ಎಂಬ ಜರ್ನಲ್ ಅನ್ನು ಪ್ರಾರಂಭಿಸಿದರು. ಇದೇ ಜರ್ನಲ್ ಮುಂದೆ ‘ಜರ್ನಲ್ ಆಫ್ ಫಿಸಿಕ್ಸ್’ ಎಂದೇ ಪ್ರಖ್ಯಾತವಾಗಿ ಇಂದಿಗೂ ಚಾಲ್ತಿಯಲ್ಲಿದೆ. 1930 ರಲ್ಲಿ ರಾಮನ್ ರವರಿಗೆ ನೊಬೆಲ್ ಪ್ರಶಸ್ತಿ ಬರಲು ‘ಜರ್ನಲ್ ಆಫ್ ಪಿಸಿಕ್ಸ್’ ಬಹಳ ಪ್ರಮುಖವಾದ್ದು.  ಬಹುಷಃ ಈ ಜರ್ನಲ್ ಅಲ್ಲಿ ರಾಮನ್ ತಮ್ಮ ಪ್ರಯೋಗದ ಪಲಿತಾಂಶವನ್ನು ಪ್ರಕಟಿಸದಿದ್ದರೆ ನೊಬೆಲ್ ಪ್ರಶಸ್ತಿ ಬರುತ್ತಿರಲಿಲ್ಲಾ ಎಂದೇ ಹೇಳಬಹುದೇನೋ?

ಚಿತ್ರ ಕೃಪೆ: ಅಂತರ್ಜಾಲ

20 ನೇ ಶತಮಾನದ ಪ್ರಾರಂಭದ ಮೂರು ದಶಕಗಳು ವಿಜ್ಞಾನ ಇತಿಹಾಸದಲ್ಲಿಯೇ, ಅದರಲ್ಲೂ ಪ್ರಮುಖವಾಗಿ ಭೌತ ವಿಜ್ಞಾನದಲ್ಲಿ ಹಲವು ಬದಲಾವಣೆಗಳಾದ ಹಾಗೂ ವಿಜ್ಞಾನದ ಸಿದ್ದ ಮಾದರಿಗಳನ್ನು ಒಡೆದುಹಾಕಿದ ದಶಕಗಳಾಗಿದ್ದವು.  ರಾಮನ್‌ರ ಸಮಕಾಲಿನರಾದ ಲಾರ್ಡ್ ರೇಲಿನ್, ನೀಲ್ಸ್ ಬೋರ್, ರುಧರ್ ಪೋರ್ಡ್, ಐನ್‌ಸ್ಟೆನ್, ಇರ್ವಿನ್ ಶ್ರೋಡಿಂಜರ್, ಮ್ಯಾಕ್ಸ್ ಬಾರ್ನ್ ನಂತಹ ಹಲವು ದಿಗ್ಗಜ ವಿಜ್ಞಾನಿಗಳು ಹೊಸ ಹೊಸ ವಿಚಾರಗಳನ್ನು ಮಂಡಿಸುತ್ತಾ ಅದನ್ನು ಪ್ರಯೋಗಕ್ಕೆ ಒಳಪಡುತ್ತಿದ್ದ ಕಾಲ. ‘ಬೆಳಕ’ನ್ನು ‘ಕಣ ಸ್ವಭಾವ’ದಿಂದ (particle nature) ಅರ್ಥ ಮಾಡಿಕೊಳ್ಳುವುದೋ ಅಥವಾ ‘ತರಂಗ ಸ್ವಭಾವ’ದಿಂದ (wave nature)  ಅರ್ಥ ಮಾಡಿಕೊಳ್ಳುವುದೋ ಎಂದು ಚರ್ಚಿಸುತ್ತಿದ್ದ, ಚಿಂತಿಸುತ್ತಿದ್ದ ಕಾಲವದು. ಅಣುಗಳ ಚಲನೆ, ಬೆಳಕಿನ ಸ್ವಭಾವ ವಿವರಿಸಲು ಹೊಸದೊಂದು ವಿಭಾಗವಾದ ಕ್ವಾಂಟಮ್ ಮೆಕಾನಿಕ್ಸ್, ವಿಷೇಶ ಮತ್ತು ಸಾಪೇಕ್ಷ ಸಿದ್ಧಾಂತಗಳು ಹುಟ್ಟುಕೊಳ್ಳುತ್ತಿದ್ದ ಕಾಲವೂ ಹೌದು.

ಈಗೆ ಅಣು, ಪರಮಾಣು ಮತ್ತು ಬೆಳಕಿನ ಹಲವು ಮಜಲುಗಳನ್ನು ಚರ್ಚಿಸುವ ಕಾಲದಲ್ಲೇ, ಅದಾಗಲೇ ಭೌತ ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿದ್ದ ಲಾರ್ಡ್ ರೇಲಿನ್, ಸಮುದ್ರ ನೀಲಿ ಬಣ್ಣದಲ್ಲಿ ಕಾಣುವುದಕ್ಕೂ ಮತ್ತು ಅದರ ನೀರಿಗೂ ಯಾವುದೇ ಸಂಬಂಧವಿಲ್ಲ, ಸಮುದ್ರ ಆಕಾಶದ ಬಣ್ಣವನ್ನು ಪ್ರತಿಫಲನೆ ಮಾಡುವುದರಿಂದ ನೀಲಿ ಬಣ್ಣದಿಂದ ಕಾಣುತ್ತದೆ ಎಂದು ಪ್ರತಿಪಾದಿಸಿದ್ದರು. 1920 ರಲ್ಲಿ ರಾಮನ್ ರೇಲಿನ್‌ನ ಈ ಪ್ರತಿಪಾಧನೆಯನ್ನು ಅಲ್ಲಗೆಳೆದು, ಸಮುದ್ರದ ನೀಲಿ ಬಣ್ಣ ಮತ್ತು ನೀರಿಗಿರುವ ಸಂಬಂಧವನ್ನು ಎಳೆ ಎಳೆಯಾಗಿ ಬಿಡಿಸಿ, ಬೆಳಕಿನ ಕಿರಣಗಳು ನೀರಿನ ಅಣುಗಳಿಂದ ವಿವರ್ತನೆಗೊಳ್ಳುವುದರಿಂದ (Diffraction of Light) ಸಮುದ್ರದ ನೀರು ನೀಲಿ ಬಣ್ಣದಲ್ಲಿ ಕಾಣುತ್ತದೆ ಎಂದು ವಿವರಿಸಿ, ಪ್ರಯೋಗ ಮಾಡಿ ತೊರಿಸಿದರು.  ಈಗೆ ಬೆಳಕಿನ ವಿವರ್ತನೆ, ಚದುರುವಿಕೆ (Scattering) ಮತ್ತು ಪ್ಲೋರೋಸೆನ್ಸ್ (Flurescence) ಬಗ್ಗೆ ಹಲವು ಪ್ರಯೋಗಗಳನ್ನು ರಾಮನ್ ನಡೆಸುತ್ತಿದ್ದರು. ಈ ಪ್ರಯೋಗಗಳಲ್ಲಿ ಬೆಳಕಿನ ಪ್ರಾಥಮಿಕ ವಿಕಿರಣಗಳು ಮತ್ತು ದ್ವಿತೀಯ ವಿಕಿರಣಗಳ ಮೇಲೆ ಹೆಚ್ಚು ಗಹನವಾಗಿ ಅಧ್ಯಯನ ಕೈಗೊಂಡಿದ್ದರು.  1921 ರ ದಶಕದಲ್ಲಿ ಈ ವಿಷಯಗಳ ಬಗ್ಗೆ ಪ್ರಪಂಚದಾದ್ಯಂತ ಅನೇಕ ಪ್ರಯೋಗಾಲಯಗಳಲ್ಲಿ ಇತರೆ ವಿಜ್ಞಾನಿಗಳೂ ಸಹ ಅಧ್ಯಯನ ನಡೆಸುತ್ತಿದ್ದರು.

ರಾಮನ್ 1922 ರಿಂದ ಸತತವಾಗಿ ಏಳು ವರ್ಷ ಈ ವಿಷಯಗಳ ಮೇಲೆ ಅನೇಕ ಸಂಶೋಧನೆಗಳನ್ನು IACS ಯಲ್ಲಿ ನಡೆಸಿದರು.  ಈ ಸಂಸ್ಥೆಯಲ್ಲಿ ರಾಮನ್‌ರ ಸಹೋದ್ಯೋಗಿ ಸಂಶೋಧಕರ ಪಟ್ಟಿ ಬಹಳ ದೊಡ್ಡದಿದೆ. ರಾಮಕೃಷ್ಣ ರಾವ್, ವೆಂಕಟೇಶ್ವರನ್, ರಾಮಚಂದ್ರರಾವ್, ರಾಮನಾಥನ್, ಶ್ರೀವಾತ್ಸವ, ಕಾಮೇಶ್ವರ್ ರಾವ್, ರಾಮದಾಸ್, ಸೊಗನಿ ಮತ್ತು ಕೆ. ಎಸ್. ಕೃಷ್ಣನ್ ಇವರುಗಳು 1922-27 ರಲ್ಲಿ ಕೈಗೊಂಡ ಬೆಳಕಿನ ಚದುರುವಿಕೆ ಮತ್ತು ಪ್ಲೋರೋಸೆನ್ಸ್ ವಿಷಯಗಳಲ್ಲಿನ ದ್ವಿತೀಯ ವಿಕಿರಣಗಳ ಬಗ್ಗೆ ಹಲವು ಅಧ್ಯಯನಗಳನ್ನು ಕೈಗೊಂಡಿದ್ದರು.  ನೊಬೆಲ್ ಪ್ರಶಸ್ತಿ ಪಡೆದ ದಿನ ತಮ್ಮ ನೋಬೆಲ್ ಉಪನ್ಯಾಸದಲ್ಲಿ ರಾಮನ್ ಇವರೆಲ್ಲರ ಹೆಸರುಗಳನ್ನು ಅವರು ನಡೆಸಿದ ಪ್ರಯೋಗಗಳನ್ನೆಲ್ಲವನ್ನು ವಿವರವಾಗಿ ಉಲ್ಲೇಖಿಸುತ್ತಾರೆ.   

ಸರ್. ಸಿ. ವಿ. ರಾಮನ್‌ಗೆ ನೊಬೆಲ್ ಪಾರಿತೋಷಕ ಒದಗಿಸಿದ ಪ್ರಯೋಗ ರಾಮನ್ ಮತ್ತು ರಾಮನ್ ಶಿಷ್ಯ ಕೆ. ಎಸ್. ಕೃಷ್ಣನ್ ಒಟ್ಟಾಗಿ ನಡೆಸಿದ ಬೆಳಕಿನ ಚದುರುವಿಕೆಗೆ ಸಂಬಂದಿಸಿದ ಅಧ್ಯಯನ. ಈ ಪ್ರಯೋಗದ ಸಂಕ್ಷಿಪ್ತ ವಿವರ ಇಲ್ಲಿದೆ: ಒಂದು ನಿರ್ದಿಷ್ಠ ತರಂಗಾಂತರದ (wavelength) ಬೆಳಕು ಧೂಳು-ಮುಕ್ತ ರಾಸಾಯನಿಕ ಸಂಯುಕ್ತದ ಮುಖಾಂತರ ಹಾದು ಚದುರುವಿಕೆಯಾಗಿ (Scattering) ಹೊರ ಬರುವಾಗ, ಆ ಬೆಳಕಿನ ತರಂಗಾಂತರ ಮೂಲ ಬೆಳಕಿನ ತರಂಗಾಂತರಕ್ಕಿಂತಲೂ ಬೇರೆಯಾಗಿರುತ್ತದೆ. ಈ ಬೇರೆಯಾಗಿರುವ ಬೆಳಕಿನ ಕಿರಣಗಳನ್ನು ದ್ವಿತೀಯ ವಿಕಿರಣ ಎಂದು ಕರೆಯಲಾಗುತ್ತೆ.  ಅಂದಿಗೆ ಅರ್ಥವಾಗಿದ್ದ ದ್ವಿತೀಯ ವಿಕರಣಗಳು ಉತ್ಪತ್ತಿಯಾಗುವ ಪ್ರಕ್ರಿಯೆಗಳಲ್ಲಿ ಯಾವ ಪ್ರಕ್ರಿಯೆಯೂ ರಾಮನ್‌ಗೆ ಕಂಡಿದ್ದ ದ್ವಿತೀಯ ವಿಕಿರಣವನ್ನು ವಿವರಿಸಲು ಸಾಧ್ಯವಾಗಲಿಲ್ಲಾ. ಇದಕ್ಕಾಗಿಯೇ ರಾಮನ್ ಈ ಪ್ರಯೋಗದ ಮೇಲೆ ಬರೆದ ಮೊದಲ ಲೇಖನ ಮತ್ತು ಉಪನ್ಯಾಸದ ಒಕ್ಕಣೆಯನ್ನು ‘ಒಂದು ಹೊಸ ವಿಕಿರಣ’ (A New Radiation) ಎಂದೇ ಕರೆದರು. ರಾಮನ್ ತಮ್ಮ ಪ್ರಯೋಗದಲ್ಲಿ ಉತ್ಪತ್ತಿಯಾಗಿದ್ದ ಹೊಸ ವಿಕಿರಣವನ್ನು ಧೂಳು-ಮುಕ್ತ ರಾಸಾಯನಿಕ ಸಂಯುಕ್ತದ ಒಳಗಡೆಯೇ ಸೃಷ್ಠಿಯಾಗುತ್ತಿದೆ ಎಂದು ಅಭಿಪ್ರಾಯ ಪಟ್ಟು, 80 ವಿವಿಧ ರಾಸಾಯನಿಕ ಸಂಯುಕ್ತಗಳಲ್ಲಿ ಇದರ ಅನ್ವೇಷಣೆ ನೆಡೆಸಿ ಸಾಬೀತುಪಡಿಸಿದರು. ಈ ಪ್ರಯೋಗ ನಡೆದದ್ದು ಫೆಬ್ರವರಿ 28, 1928! ನಂತರದ ದಿನದಲ್ಲಿಯೇ ಈ ಪ್ರಯೋಗದ ಬಗ್ಗೆ ಒಂದು ಲೇಖನವನ್ನು IACSನ ಜರ್ನಲ್ ಆಫ್ ಫಿಸಿಕ್ಸ್ನಲ್ಲಿ ರಾಮನ್ ಪ್ರಕಟಿಸುತ್ತಾರೆ. ಈ ಪ್ರಕಟಣೆಯನ್ನು ಪ್ರಪಂಚದಾದ್ಯಂತ ಪ್ರಚಾರ ಮಾಡಲಾಗುತ್ತದೆ, ರಾಮನ್ ಕೂಡ ಇತರ ದೇಶದಲ್ಲಿನ ತನ್ನ ಸಹ ವಿಜ್ಞಾನಿಗಳಿಗೂ ಕಳುಹಿಸುತ್ತಾರೆ.

ಇದೇ ಸಮಯದಲ್ಲಿ ರಷ್ಯಾದ ವಿಜ್ಞಾನಿಗಳಾದ ಲ್ಯಾಂಡ್ಸ್ಬರ್ಗ್ ಮತ್ತು ಮೆಂಡಲ್‌ಸ್ಟಾö್ಯಮ್ ಸಹ ಇಂತಹದೇ ಪ್ರಯೋಗ ನಡೆಸಿ, ಬೆಳಕಿನ ಚದುರುವಿಕೆಯಲ್ಲಿನ ಹೊಸ ದ್ವಿತೀಯ ವಿಕಿರಣಗಳ ಬಗ್ಗೆ ಅಧ್ಯಯನ ನಡೆಸಿ ಯಶಸ್ಸು ಕಂಡಿರುತ್ತಾರೆ. ಈ ಪ್ರಯೋಗ ಅಂದಿನ ಕಾಲಕ್ಕೆ ಬಹಳ ಪ್ರಮುಖವಾದ ಪ್ರಯೋಗ ಮತ್ತು ವಿಜ್ಞಾನದ ಒಂದು ಮೈಲುಗಲ್ಲು. ಏಕೆಂದರೆ, ಈ ಪ್ರಯೋಗದಿಂದ ಬರುವ ಹೊಸ ವಿಕಿರಣದ ರೋಹಿತವನ್ನು (Spectrum) ಅಧ್ಯಯನ ಮಾಡಿದರೆ, ಪ್ರಯೋಗಕ್ಕೆ ಬಳಸಿದ ರಾಸಾಯನಿಕ ಸಂಯುಕ್ತದ ಅಣುಗಳ ರಚನೆಯನ್ನು ಯಾವುದೇ ಕಷ್ಟವಿಲ್ಲದೆ ಸುಲಭವಾಗಿ ವಿವರಿಸಬಹುದಾಗಿದೆ. ಅಂದಿನವರೆಗೂ ಇಂತಹಾ ರಾಸಾಯನಿಕ ಸಂಯುಕ್ತವನ್ನು ಅಧ್ಯಯನ ನಡೆಸುವ ಮಾರ್ಗವೇ ಇರಲಿಲ್ಲಾ. ಹಾಗಾಗಿ, ಈ ಪ್ರಯೋಗವು ಭೌತ ವಿಜ್ಞಾನದಲ್ಲಿ ಕ್ರಾಂತಿಯೇ ಆಯಿತು. ಇಂದಿಗೂ ಕೂಡ ಈ ಪ್ರಯೋಗ, ಅಂದರೇ ರಾಮನ್ ಪರಿಣಾಮ ತುಂಬಾ ಪ್ರಮುಖವಾದದ್ದು. ಮಂಗಳನ ಗ್ರಹದ ಮೇಲೆ ಇಳಿದಿರುವ ಪರ್ಸಿವರೆನ್ಸ್ ರೋವರ್ ಕೂಡ ಮಂಗಳನ ಮಣ್ಣುಗಳನ್ನು ಪರೀಕ್ಷೆ ಮಾಡಲು ರಾಮನ್ ರೋಹಿತನ್ನೂ ಅವಲಂಬಿಸಿದೆ. ಈ ಕ್ರಾಂತಿಕಾರಿ ಪ್ರಯೋಗಕ್ಕೆ 1929 ಮತ್ತು 1930 ರಲ್ಲಿ ಹಲವು ವಿಜ್ಞಾನಿಗಳು ರಾಮನ್ ಮತ್ತು ರಷ್ಯಾದ ವಿಜ್ಞಾನಿಗಳಾದ ಲ್ಯಾಂಡ್ಸ್ಬರ್ಗ್ ಮತ್ತು ಮೆಂಡಲ್‌ಸ್ಟಾö್ಯಮ್ ರವರನ್ನು ನೊಬೆಲ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದರು. ಅದರಲ್ಲೂ 1930 ರಲ್ಲಿ ಸುಮರು ಹತ್ತಕ್ಕೂ ಹೆಚ್ಚು ವಿಜ್ಞಾನಿಗಳು ರಾಮನ್ ಹೆಸರನ್ನು ನಾಮನಿರ್ದೇಶನ ಮಾಡಿದ್ದು, ಆ ವರ್ಷ ಸಿ. ವಿ. ರಾಮನ್ ಒಬ್ಬರಿಗೆ ಭೌತ ವಿಜ್ಞಾನ ವಿಷಯದ ನೊಬೆಲ್ ಪ್ರಶಸ್ತಿ ಬರುತ್ತದೆ.   

ಈ ಹೊಸ ವಿಕಿರಣದ ಅನ್ವೇಷಣೆಯನ್ನು ರಷ್ಯ ವಿಜ್ಞಾನಿಗಳಿಗಿಂತಲೂ ರಾಮನ್ ಭಾರತದ ಜರ್ನಲ್ ಆರ್ಫ ಫಿಸಿಕ್ಸ್ನಲ್ಲಿ ಮೊದಲು ಪ್ರಕಟಿಸಿರುತ್ತಾರೆ. ಇದಾದ ನಂತರ ರಾಮನ್ ನೇಚರ್ ಜರ್ನಲ್ ಅಲ್ಲಿ ಪ್ರಕಟಿಸಿರುತ್ತಾರೆ, ಅಷ್ಟೊತ್ತಿಗೆ ರಷ್ಯಾ ವಿಜ್ಞಾನಿಗಳೂ ಸಂಶೋಧನೆಯನ್ನು ಪ್ರಕಟಿಸಿರುತ್ತಾರೆ.  ನೊಬಲ್ ಸಮಿತಿಯು ತನ್ನ 1930 ರ ಭೌತ ವಿಜ್ಞಾನ ಪ್ರಶಸ್ತಿ ನೀಡುವ ವಿವರಗಳಲ್ಲಿ IACSಲ್ಲಿ ಪ್ರಕಟವಾದ ರಾಮನ್ ಲೇಖನವನ್ನು ಸಹ ಪಟ್ಟಿ ಮಾಡಿ, ಇದು ಈ ಪ್ರಯೋಗದ ಮೊದಲ ಪ್ರಕಟಣೆ ಎಂದೇ ಪರಿಗಣಸಿರುತ್ತದೆ. ಹೀಗೆ ರಾಮನ್ ತಾವೇ ಪ್ರಾರಂಭಿಸಿದ್ದ IACS ನ ಜರ್ನಲ್ ಆಫ್ ಫಿಸಿಕ್ಸ್ನ  ಅನ್ನು ಸಂಸ್ಥೆಯ ಪ್ರಯೋಗಗಳ ಪಲಿತಾಂಶಗಳನ್ನು ತಕ್ಷಣಕ್ಕೆ ಪ್ರಕಟಿಸಲು ಮತ್ತು ಎಲ್ಲರಿಗೂ ತಿಳಿಸಲು ಸೂಕ್ತವಾಗಿ ಬಳಸಿಕೊಂಡಿದ್ದರು. ಇಂದಿಗೂ ಜರ್ನಲ್ ಆಫ್ ಪಿಸಿಕ್ಸ್ ಭಾರತದ ಪ್ರಸಿದ್ದ ಭೌತ ವಿಜ್ಞಾನ ಜರ್ನಲ್ ಆಗಿದೆ.

ಈಗಿದ್ದರೂ, ಭಾರತಕ್ಕೆ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಪ್ರಯೋಗವನ್ನು ರಾಮನ್ ಒಬ್ಬರೆ ಕೈಗೊಂಡಿರಲಿಲ್ಲಾ. ಈ ಅಧ್ಯಯನದಲ್ಲಿ ಅನೇಕ ಪ್ರಯೋಗಗಳನ್ನು ಸಿ. ವಿ. ರಾಮನ್ ಮತ್ತು ಕೆ. ಎಸ್. ಕೃಷ್ಣನ್ ಇಬ್ಬರೂ ನಡೆಸಿದ್ದರು.  ಈ ಪ್ರಯೋಗದಲ್ಲಿನ ಅನ್ವೇಷಣೆಯ ಬಗ್ಗೆ ಪ್ರಕಟವಾದ ಮೊದಲ ವೈಜ್ಞಾನಿಕ ಲೇಖನದಲ್ಲಿ ರಾಮನ್‌ರ ಜೊತೆ ಕೃಷ್ಣನ್ ಕೂಡ ಎರಡನೇ ಸಂಶೋಧಕ ಲೇಖಕರಾಗಿದ್ದರು. ತದನಂತರ ಪ್ರಕಟವಾದ ಎರಡನೇ ಪತ್ರಿಕೆಯಾದ A change of wavelength in light scattering ನಲ್ಲಿ ರಾಮನ್ ಒಬ್ಬರೇ ಲೇಖಕರಾಗಿರುತ್ತಾರೆ. ಇದಕ್ಕೆ ಕಾರಣ ಇಂದಿಗೂ ತಿಳಿದಿಲ್ಲಾ. ಆದರೂ, ರಾಮನ್ ತಮ್ಮ ಎಲ್ಲಾ ಉಪನ್ಯಾಸಗಳಲ್ಲೂ ಮತ್ತು ಲೇಖನಗಳಲ್ಲೂ ಕೆ. ಎಸ್. ಕೃಷ್ಣನ್ ರವರ ಕೊಡುಗೆಯನ್ನು ಸ್ಮರಿಸುತ್ತಲೇ ಇರುವುದನ್ನು ನಾವು ಈ ಪ್ರಯೋಗಕ್ಕೆ ಸಂಬಂದಿಸಿದ ಅವರ ಎಲ್ಲಾ ಸಂಶೋಧನಾ ಲೇಖನಗಳನ್ನು ಒದಿದರೆ ತಿಳಿಯುತ್ತದೆ. ಒಂದು ಸಂದರ್ಭದಲ್ಲಿ, ರಾಮನ್ ಈ ಸಂಶೋಧನೆಯನ್ನು ‘ರಾಮನ್-ಕೃಷ್ಣನ್ ಪರಿಣಾಮ’ ಎಂದೇ ಹೆಸರಿಸಬೇಕು ಎಂದಿದ್ದರಂತೆ. ಆದರೂ ಇಂದಿಗೂ ಈ ಪ್ರಯೋಗ ರಾಮನ್ ಪರಿಣಾಮ ಎಂದೇ ಪ್ರಸಿದ್ದಿಯಾಯಿಗಿದೆ. ರಾಮನ್ ಪರಿಣಾಮದ ಅನ್ವೇಷಣೆಯಲ್ಲಿ ಪ್ರಮುಖ ಪಾತ್ರವಹಿಸಿದ ಕೃಷ್ಣನ್ ಕೂಡ ತಮ್ಮ ಡೈರಿಯಲ್ಲಿ ಈ ಪ್ರಯೋಗದ ನಿರ್ಣಾಯಕ ಘಟ್ಟದಲ್ಲಿ ಹೊಸ ವಿಕಿರಣದ ಪಲಿತಾಂಶವನ್ನು ಸೂಕ್ತವಾಗಿ ವಿಷ್ಲೇಶಿಸಿದ್ದು ಪ್ರೊ. ರಾಮನ್ ರವರೇ, ನಮಗಾರಿಗೂ ಅಂತಹಾ ಯೋಚನೆ ಹೊಳೆದಿರಲೇ ಇಲ್ಲಾ ಎಂದು ಬರೆದುಕೊಳ್ಳುತ್ತಾರೆ. ಹಲವು ವರ್ಷಗಳ ನಂತರ ರಾಮನ್, ಕೃಷ್ಣನ್‌ರವರನ್ನು ಫೆಲೋ ಆಫ್ ರಾಯಲ್ ಸೊಸೈಟಿ ಆಪ್ ಲಂಡನ್‌ಗೆ ನಾಮ ನಿರ್ದೇಶನ ಮಾಡುತ್ತಾರೆ.  ಆ ನಾಮನಿರ್ದೇಶನದ ಪತ್ರದಲ್ಲಿ ಕೆ. ಎಸ್. ಕೃಷ್ಣನ್ ಅನ್ನು ರಾಮನ್ ಪರಿಣಾಮದ ಸಹ ಅನ್ವೇಷಕ ಎಂದೇ ಬರೆಯುತ್ತಾರೆ! ಅಲ್ಲದೆ, ಭಾರತದ ವಿಜ್ಞಾನ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಕೆ. ಎಸ್. ಕೃಷ್ಣನ್ (1958 ರಲ್ಲಿ).  

ಏನೇ ಇರಲಿ, ಈ ಪ್ರಯೋಗಕ್ಕೆ 1930 ರಲ್ಲಿ ಸರ್ ಸಿ. ವಿ. ರಾಮನ್‌ಗೆ ನೊಬೆಲ್ ಪ್ರಶಸ್ತಿ ನೀಡಲಾಯಿತು. ಇದು ಭಾರತದ ವಿಜ್ಞಾನ ಕ್ಷೇತ್ರಕ್ಕೆ ಸಂದ ಮೊದಲ ನೊಬೆಲ್ ಪಾರಿತೋಷಕ.  ಈ ಸಾಧನೇ, ರಾಮನ್ ಹೆಸರಿನ ವೈಯ್ಯಕ್ತಿಕ ವಿಜ್ಞಾನಿ ಹೆಸರಿನಲ್ಲಿದ್ದರೂ, ಈ ಪ್ರಶಸ್ತಿಯು ಅಂದು/ ಇಂದು ದೇಶದಲ್ಲಿ ನಡೆಯುತ್ತಿದ್ದ / ನಡೆಯುತ್ತಿರುವ ವೈಜ್ಞಾನಿಕ ಸಂಶೋಧನೆಗಳು, ಪ್ರಯೋಗಗಳು, ಚಿಂತನೆಗಳು ಮತ್ತು ಹೊಸ ವಿಚಾರಗಳಿಗೆ ಸ್ಪೂರ್ತಿ ನೀಡಿತ್ತಿರುವುದಂತೂ ನಿಜ.  ಆಗ ತಾನೆ ಮೊಳಕೆಯಲ್ಲಿದ್ದ ಕ್ವಾಂಟಮ್ ಮೆಕಾನಿಕ್ಸ್ ವಿಷಯವನ್ನು ಒಪ್ಪುವ-ತಿರಸ್ಕರಿಸುವ ಚಿಂತನೆಗಳಿಗೆ ರಾಮನ್ ಪರಿಣಾಮದ ಪ್ರಯೋಗ ಕ್ವಾಂಟಮ್ ಮೆಕಾನಿಕ್ಸ್ ವಿಷಯವನ್ನು ಪುರಸ್ಕರಿಸಿ, ಮೊದಲ ಪುರಾವೆ ಕೊಟ್ಟಿತು. ತದನಂತರ ಕ್ಯಾಂಟಮ್ ಮೆಕಾನಿಕ್ಸ್ ಬೆಳೆದ ರೀತಿಯೇ ಅದ್ಬುತ!